19 ವರ್ಷದ ಪ್ರಿಯಾಂಶ್ ಆರ್ಯ ಆರ್ಭಟಕ್ಕೆ ಸಿಎಸ್ಕೆ ಉಡೀಸ್ ಆಗಿದ್ದು, ಪಂಜಾಬ್ ವಿರುದ್ಧ 18 ರನ್ ಗಳಿಂದ ಸೋತಿದೆ. ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅದ್ಭುತ ಪ್ರದರ್ಶನ ತೋರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರನ್ಗಳ ರೋಚಕ ಜಯ ಸಾಧಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತ್ತು. ಪಂಜಾಬ್ ಕಿಂಗ್ಸ್ ಪರ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ 103 ರನ್ ಗಳಿಸಿದರೆ, ಶಶಾಂಕ್ ಸಿಂಗ್ ಅಜೇಯ 52 ರನ್ ಗಳಿಸಿದರು. ಈ ಮೊತ್ತವನ್ನು ಬೆನ್ನಟ್ಟಿದ ಸಿಎಸ್ಕೆ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ಗಳಿಸಲಷ್ಟೇ ಶಕ್ತವಾಗಿ 18 ರನ್ಗಳಿಂದ ಸೋಲು ಕಂಡಿತು.
220ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಪವರ್ ಪ್ಲೇನಲ್ಲಿ 60 ರನ್ಗಳಿಸಿ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ಗೆ ಕಿವೀಸ್ ಜೋಡಿಗಳಾದ ರಚಿನ್ ರವೀಂದ್ರ ಹಾಗೂ ಡಿವೋನ್ ಕಾನ್ವೆ 61 ರನ್ ಸೇರಿಸಿದರು. 7ನೇ ಓವರ್ ಬೌಲಿಂಗ್ ಮಾಡಲು ಬಂದ ಗ್ಲೆನ್ ಮ್ಯಾಕ್ಸ್ವೆಲ್ ರಚಿನ್ ರವೀಂದ್ರ ವಿಕೆಟ್ ಪಡೆಯುವ ಮೂಲಕ ಪಂಜಾಬ್ ಕಿಂಗ್ಸ್ಗೆ ಬ್ರೇಕ್ ನೀಡಿದರು. ಆ ನಂತರ ಬಂದ ನಾಯಕ ಕೇವಲ 1 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ಸತತ 2ನೇ ಪಂದ್ಯದಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
3ನೇ ವಿಕೆಟ್ಗೆ ಒಂದಾದ ಶಿವಂ ದುಬೆ ಹಾಗೂ ಡಿವೋನ್ ಕಾನ್ವೆ 89 ರನ್ಗಳ ಜೊತೆಯಾಟ ನೀಡುವ ಮೂಲಕ ಪಂದ್ಯವನ್ನ ಸಿಎಸ್ಕೆ ಕಡೆಗೆ ತಿರುಗಿಸಿದ್ದರು. ಆದರೆ ಫರ್ಗ್ಯಸನ್ ಶಿವಂ ದುಬೆಯನ್ನ ಬೌಲ್ಡ್ ಮಾಡುತ್ತಿದ್ದಂತೆ ಸಿಎಸ್ಕೆ ಗೆಲುವಿನ ಆಸೆ ಕಮರಿತು. ದುಬೆ ವಿಕೆಟ್ ಬಿದ್ದ ಸಂದರ್ಭದಲ್ಲಿ ಸಿಎಸ್ಕೆ ಗೆಲುವುಗೆ 25 ಎಸೆತಗಳಲ್ಲಿ 68 ರನ್ಗಳ ಅಗತ್ಯವಿತ್ತು
ಆದರೆ ನಿರ್ಣಾಯಕ 17ನೇ ಓವರ್ ಎಸೆದ ಯುಜ್ವೇಂದ್ರ ಚಹಲ್ ಕೇವಲ 7 ರನ್ ನೀಡಿದರು. ಕೊನೆ 18 ಎಸೆತಗಳಲ್ಲಿ ಸಿಎಸ್ಕೆಗೆ 59 ರನ್ ಅತಗ್ಯವಿತ್ತು. ಫರ್ಗ್ಯುಸನ್ 18ನೇ ಓವರ್ನಲ್ಲಿ 16, ಅರ್ಶದೀಪ್ ಎಸೆದ 19ನೇ ಓವರ್ನಲ್ಲಿ 15 ರನ್ ಹಾಗೂ 20ನೇ ಓವರ್ನಲ್ಲಿ ಕೇವಲ 9 ರನ್ ಗಳಿಸಲಷ್ಟೇ ಶಕ್ತವಾಯಿತು. ಧೋನಿ 12 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ಗಳ ಸಹಿತ 27 ರನ್ಗಳಿಸಿ ಮಿಂಚಿದರಾದರೂ ಅವರ ಆಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಆರಂಭಿಕರಾಗಿ ಬಂದ ಡಿವೋನ್ ಕಾನ್ವೆ 49 ಎಸೆತಗಳನ್ನಾಡಿ 6 ಬೌಂಡರಿ, 2 ಸಿಕ್ಸರ್ ಸಹಿತ 69 ರನ್ಗಳಿಸಿದರು. ಇವರ ನಿಧಾನಗತಿ ಆಟವೇ ಸಿಎಸ್ಕೆ ಸೋಲಿಗೆ ಕಾರಣವಾಯಿತು.