ಕಾಲು ಎಳೆಯುವವರು ಕಾಲ್ ಕೆಳಗೆ ಇರ್ತಾರೆ. ನಾವು ನಮ್ಮ ಕೆಲಸ ಮಾಡೋಣಾ ಎಂಬ ಫಾರ್ಮೂಲ ಇಟ್ಕೊಂಡು ಸದಾ ಹೊಸ ಪ್ರಯೋಗಗಳಿಗೆ ಮುನ್ನುಡಿ ಹಾಕುವ ಕನ್ನಡ ಸ್ಟಾರ್ ಡೈರೆಕ್ಟರ್ ಆರ್.ಚಂದ್ರು. ಚಿಕ್ಕಬಳ್ಳಾಪುರದ ಕೇಶವವರದ ಈ ಕುವರ ಪ್ಯಾನ್ ಇಂಡಿಯಾ ಸಿನಿಮಾ ಬಿಟ್ಟು ಈಗ ಪ್ಯಾನ್ ವರ್ಲ್ಡ್‌ಗೆ ಗುರಿ ಇಟ್ಟಿದ್ದಾರೆ. ಕಬ್ಜ ಬಳಿಕ ಆರ್ ಚಂದ್ರು ತಮ್ಮದೇ ಆರ್‌ಸಿ ಸ್ಟುಡಿಯೋ ಬ್ಯಾನರ್ ಆರಂಭಿಸಿದ್ದು, ಈ ಸಂಸ್ಥೆಯಡಿ ಒಟ್ಟಿಗೆ ಐದು ಸಿನಿಮಾ ಘೋಷಿಸಿದ್ದರು.
ಫಾದರ್ , ಡಾಗ್ ಶ್ರೀ ರಾಮ ಬಾಣ ಚರಿತ , ಪಿಒಕೆ ಮತ್ತು ಕಬ್ಜಾ 2 ಚಿತ್ರಗಳಲ್ಲಿ ಸದ್ಯ ಫಾದರ್ ಸಿನಿಮಾದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್ ಮತ್ತು ಅಮೃತ ಅಯ್ಯಂಗಾರ್ ನಟಿಸಿರುವ ಫಾದರ್ ಚಿತ್ರವನ್ನು ರಾಜ್ ಮೋಹನ್ ನಿರ್ದೇಶಿಸಿದ್ದಾರೆ. ತಂದೆ ಮತ್ತು ಮಗನ ನಡುವಿನ ಬಾಂಧವ್ಯ ಕುರಿತು ಈ ಚಿತ್ರವನ್ನು ಚಂದ್ರು ಅವರಿಗೆ ಸಖತ್ ಫೇಮ್ ಕೊಟ್ಟ ತಾಜ್ ಮಹಲ್ ಚಿತ್ರದ 15ನೇ ವಾರ್ಷಿಕೋತ್ಸವದ ನೆನಪಿಗಾಗಿ ಜುಲೈ 25 ರಂದು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.
ಆರ್‌ಸಿ ಸ್ಟುಡಿಯೋಸ್‌ನ ಮುಂದಿನ ಸಿನಿಮಾಗಳನ್ನು ಆರ್ ಚಂದ್ರು ಬಹಳ ದೊಡ್ಡದಾಗಿ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರಂತೆ. ದೊಡ್ಡದು ಎಂದರೆ ಕಬ್ಜ ಸಿನಿಮಾಗಿಂತ ಹತ್ತುಪಟ್ಟು ದೊಡ್ಡದು. ಈ ಮೂಲಕ ಪ್ಯಾನ್ ಇಂಡಿಯಾ ಬಿಟ್ಟು ಪ್ಯಾನ್ ವರ್ಲ್ಡ್ ಗುರಿ ಇಟ್ಟಿದ್ದಾರೆ. ಹಾಲಿವುಡ್ ಚಿತ್ರಗಳಿಗೂ ಸೆಡ್ಡು ಹೊಡೆದು ಹೊಸದೇನನ್ನು ಮಾಡುವ ತವಕದಲ್ಲಿದ್ದಾರೆ ತಾಜ್‌ಮಹಲ್ ಸಾರಥಿ.
ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಇತ್ತೀಚೆಗೆ ಮಾತನಾಡಿರುವ ಆರ್.ಚಂದ್ರು, “ಇಡೀ ಭಾರತ ಮಾತ್ರವಲ್ಲದೇ ಜಾಗತಿಕ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದು, ಅಂತರರಾಷ್ಟ್ರೀಯ ಕಲಾವಿದರನ್ನು ಕರೆತರುತ್ತಿದ್ದೇನೆ. ಹಾಲಿವುಡ್ ಶೈಲಿಯ ಚಿತ್ರ ತಯಾರಾಗಲಿದೆ. ನನ್ನ ಮುಂದಿನ ಸಿನಿಮಾ ಭಾರತದ ಅತಿದೊಡ್ಡ ಯೋಜನೆಯಾಗಿದ್ದು, ಇದುವರೆಗೆ ಎಂದಿಗೂ ಪ್ರಯತ್ನಿಸದ ಯೋಜನೆ. ನಾನು ಅಂತರರಾಷ್ಟ್ರೀಯ ಬ್ಯಾನರ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇನೆ”ಎಂದು ಹೇಳಿಕೊಂಡಿದ್ದಾರೆ.