ನವದೆಹಲಿ: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ 2008 ನವೆಂಬರ್ 26ರಂದು ಮುಂಬೈ ಸರಣಿ ಬಾಂಬ್ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ತವಾವುರ್ ಹುಸೈನ್ ರಾಣಾನನ್ನು ಕೊನೆಗೂ ಭಾರತಕ್ಕೆ ಎಳೆದು ತರಲಾಗಿದೆ.
ಅಮೇರಿಕದಿಂದ ಗಡಿಪಾರಾದ ಉಗ್ರ ರಾಣಾನನ್ನು ವಿಶೇಷ ವಿಮಾನದ ಮೂಲಕ ನವದೆಹಲಿಗೆ ತರಲಾಯಿತು.ರಾಣಾನನ್ನು ಕರೆ ತಂದ ವಿಶೇಷ ವಿಮಾನ ಮಧ್ಯಾಹ್ನ 2.50ಕ್ಕೆ ದೆಹಲಿಯ ಪಾಲಂ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಯಿತು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಎನ್‌ಐಎ ಅಧಿಕಾರಿಗಳು ತವಾವುರ್ ರಾಣಾನನ್ನು ಬಂಧಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೈಅಲರ್ಟ್ ಮಾಡಲಾಗಿದೆ.
ಪಾಕಿಸ್ತಾನ ಮೂಲದ 64 ವರ್ಷದ ರಾಣಾ, ಕೆನಡಾದಲ್ಲಿ ವಾಸವಾಗಿದ್ದ. ಈತನನ್ನು ಅಮೆರಿಕದ ಗುಪ್ತಚರ ಸಂಸ್ಥೆಗಳು ಬಂಧಿಸಿ ಜೈಲಿಗೆ ಅಟ್ಟಿದ್ವು. ಭಾರತಕ್ಕೆ ಗಡೀಪಾರು ತಪ್ಪಿಸಿಕೊಳ್ಳಲು ರಾಣಾ ಅಮೆರಿಕದ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಆದರೆ, ಆತನ ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು.
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನಿ ಅಮೆರಿಕನ್ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟ ಸಹಚರನಾಗಿದ್ದ ರಾಣಾ 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬ. ರಾಣಾನನ್ನು ದೆಹಲಿಯ ಎನ್ ಐಎ ಕೋರ್ಟ್ ಗೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆಯಲಿರುವ ಎನ್ ಐಎ ಅಧಿಕಾರಿಗಳು, ರಾಣಾನ ವಿಚಾರಣೆ ಆರಂಭಿಸಲಿದ್ದಾರೆ. ಇದು ಮುಂಬೈ ದಾಳಿಯ ತನಿಖೆಗೆ ಮತ್ತಷ್ಟು ಸ್ಪಷ್ಟತೆ ಸಿಗಲಿದೆ.
2008ರ ನವೆಮಬರ್ 26ರಂದು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೆ ನಿಲ್ದಾಣ, ತಾಜ್ ಹೋಟೆಲ್ ಮೇಲೆ ದಾಳಿ ಮಾಡಿದ್ದ ಉಗ್ರರು, 166 ಜನರನ್ನು ಹತ್ಯೆ ಮಾಡಿದ್ದರು. ದಾಳಿ ವೇಳೆ ಸೆರೆ ಸಿಕ್ಕಿದ್ದ ಉಗ್ರ ಕಸಬ್ ನನ್ನು ಈಗಾಗಲೇ ಭಾರತ ಗಲ್ಲಿಗೇರಿಸಿದೆ.
ಉಗ್ರ ರಾಣಾನನ್ನು ಭಾರತಕ್ಕೆ ಎಳೆದು ತಂದ ಎನ್ ಐಎ: ದೆಹಲಯಲ್ಲಿ ಫುಲ್ ಹೈಅಲರ್ಟ್
By Author AIN