ಬೆಂಗಳೂರು:- ಟ್ರಾಫಿಕ್ ಪೊಲೀಸರ ತಪಾಸಣೆಯ ವೇಳೆ ಮೃತಪಟ್ಟ 3 ವರ್ಷದ ಮಗುವಿನ ಸ್ವಗೃಹಕ್ಕೆ ಭೇಟಿ ನೀಡಿ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಾಂತ್ವನ ಹೇಳಿದರು.
ಮಗುವಿನ ಪೋಷಕರ ಬಳಿ ಘಟನೆ ಬಗ್ಗೆ ಮಾಹಿತಿ ಪಡೆದ ಸಚಿವರು ನಂತರ ಮಾತನಾಡಿ
ಸಂಚಾರಿ ನಿಯಮಗಳನ್ನು ಪಾಲಿಸದೇ ಇದ್ದಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ದಂಡ ವಿಧಿಸಬೇಕು. ಬೇರೆ ರೀತಿ ವರ್ತಿಸಿ ತೊಂದರೆ ನೀಡುವುದು ತಪ್ಪು, ತುರ್ತು ಸಂದರ್ಭದಲ್ಲಿ ನಿಯಮ ಪಾಲಿಸುವಂತೆ ಅಡ್ಡ ಹಾಕಿರುವಂತದ್ದು ಅಮಾನವೀಯ ವರ್ತನೆ ಆಗಿದ್ದು ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವ್ಯವಸ್ಥೆಯ ನಿಯಮವನ್ನು ಪಾಲಿಸುವುದು ಸರ್ಕಾರಿ ನೌಕರರ ಆದ್ಯ ಕರ್ತವ್ಯವಾಗಿದೆ. ಆದರೆ ವ್ಯವಸ್ಥೆಯಿಂದ ಮತ್ತೊಬ್ಬರ ಪ್ರಾಣಹಾನಿಯಾಗುವಂತೆ, ತೊಂದರೆಯಾಗುವಂತೆ ನಡೆದುಕೊಳ್ಳಬಾರದು ಎಂದು ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು.
*ಮೂರು ಜನ ಪೊಲೀಸರು ಅಮಾನತು*
ಈ ಒಂದು ದುರ್ಘಟನೆಗೆ ಕಾರಣರಾಗಿರುವ ಮೂರು ಜನ ಪೊಲೀಸ್ ರನ್ನು ಅಮಾನತ್ತು ಮಾಡುವ ನಿಟ್ಟಿನಲ್ಲಿ ತನಿಖೆ ಶುರುವಾಗಿದ್ದು, ಅವರನ್ನು ಅಮಾನತುಗೊಳಿಸಲಾಗುವುದು
ಎಂದರು.
*ಆಂಬುಲೆನ್ಸ್ ವ್ಯವಸ್ಥೆ ಬಳಸಿಕೊಳ್ಳಿ*
ಮದ್ದೂರಿನ ಆಸ್ಪತ್ರೆಯಿಂದ ಮಗುವನ್ನು ಆಂಬುಲೆನ್ಸ್ ನಿಂದ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಬಹುದಾಗಿತ್ತು ಮದ್ದೂರು ಆಸ್ಪತ್ರೆಯ ದುಸ್ಥಿತಿ ಕುರಿತು ಮಾಹಿತಿಗಳು ತಿಳಿದು ಬಂದಿದ್ದು ಮದ್ದೂರು ವೈದ್ಯಾಧಿಕಾರಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ದಿನದ 24 ಗಂಟೆಗಳ ಕಾಲ ಆಂಬುಲೆನ್ಸ್ ವ್ಯವಸ್ಥೆಯಿದೆ ಇಂತಹ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆಯನ್ನು ಸಾರ್ವಜನಿಕರು ಬಳಸಿಕೊಳ್ಳಿ ಹಾಗೂ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಿಗೂ ಆಂಬುಲೆನ್ಸ್ ತುರ್ತು ಸಂದರ್ಭದಲ್ಲಿ ಆಗಮಿಸುವುದು ಕಡ್ಡಾಯವಾಗಿರುತ್ತದೆ ಎಂದರು.
ಇನ್ನೂ ಕೆಲವೇ ದಿನಗಳಲ್ಲಿ ಸಂಚಾರಿ ಪೋಲೀಸರು ನಿಯಮ ಪಾಲಿಸುವ ಬಗ್ಗೆ ಹಾಗೂ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಹಕರಿಸುವ ಬಗ್ಗೆ ಕುರಿತು ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಪಿ. ರವಿಕುಮಾರ್ ಅವರು ಸೇರಿತಂದ ಇನ್ನಿತರರು ಹಾಜರಿದ್ದರು.