ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣದ ಆರೋಪಿಯ ಎನ್ಕೌಂಟರ್, ಇದೀಗ ಇಡೀ ದೇಶಾದ್ಯಂತ ಚರ್ಚೆಯಾಗುತ್ತಿದೆ. ಇದೀಗ 5 ವರ್ಷದ ಬಾಲಕಿಯ ಅಂತ್ಯಕ್ರಿಯೆ ಇಂದು ಹುಬ್ಬಳ್ಳಿಯ ದೇವಾಂಗ ಪೇಟ ರುದ್ರಭೂಮಿಯಲ್ಲಿ ನೇರವೇರಿತು. ಕುಟುಂಬಸ್ಥರು ವಿಧಿವಿಧಾನಗಳೊಂದಿಗೆ ಕುರುಬ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದರು.
ಹುಡುಗಿಯರೇ ನೀವು ಕೂಡ ಮೆಡಿಮಿಕ್ಸ್ ಸೋಪ್ ಬಳಸ್ತಿದ್ದೀರಾ? ಇದು ಖಂಡಿತ ನಿಮಗಲ್ಲ!
ಕಿಮ್ಸ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ಬಳಿಕ ಬಾಲಕಿಯ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮಗಳ ಶವವನ್ನು ಕೈಯಲ್ಲಿ ಹೊತ್ತು ತಂದ ತಂದೆ, ದೇವಾಂಗ ಪೇಟ ಸ್ಮಶಾನಕ್ಕೆ ತೆರಳಿ ಕುರುಬ ಸಂಪ್ರದಾಯದಂತೆ ಪೂಜೆ ಮಾಡಿದರು. ಬಳಿಕ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಏನು?
ಸೈಕೋಪಾತ್ ಒಬ್ಬ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಬಿಹಾರ ಮೂಲದ ಸೈಕೋಪಾತ್ ಬಾಲಕಿಯನ್ನ ಶೆಡ್ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದನು. ಬಾಲಕಿ ಚೀರಾಟ ಕೇಳಿ ಅಲ್ಲೇ ಇದ್ದ ಸ್ಥಳೀಯರು ಶೆಡ್ನತ್ತ ಬಂದಿದ್ದರು. ಜನ ಬರುತ್ತಿರುವುದನ್ನು ಕಂಡ ಸೈಕೋಪಾತ್ ಭಯದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಎಸ್ಕೇಪ್ ಆಗಿದ್ದನು.
ಪೊಲೀಸರ ಗುಂಡೇಟಿಗೆ ಆರೋಪಿ ಬಲಿ
ಆರೋಪಿಯನ್ನು ಬಂಧಿಸಲು ಹುಬ್ಬಳ್ಳಿ ಪೊಲೀಸರು ಬಲೆ ಬೀಸಿದರು. ಆರೋಪಿ ಅಡಗಿರುವ ಸ್ಥಳದ ಮಾಹಿತಿ ತಿಳಿದ ಪೊಲೀಸರು ಆತನನ್ನು ಬಂಧಿಸಲು ತೆರಳಿದರು. ಈ ವೇಳೆ ಆರೋಪಿ ರಿತೇಶ್ ಕುಮಾರ್ ಪೊಲೀಸರ ಮೇಲೆ ದಾಳಿ ಮಾಡಿ, ಓಡಿ ಹೋಗಲು ಯತ್ನಸಿದನು. ಆತ್ಮರಕ್ಷಣೆಗಾಗಿ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಪೊಲೀಸರು ಹಾರಿಸಿದ ಗುಂಡು ಆರೋಪಿ ರಿತೇಶ್ ಕುಮಾರ್ ಬೆನ್ನಿಗೆ ತಗುಲಿದೆ. ಕೂಡಲೆ, ಪೊಲೀಸರು ಆರೋಪಿ ರಿತೇಶ್ ಕುಮಾರ್ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ರಿತೇಶ್ ಕುಮಾರ್ ಮೃತಪಟ್ಟಿದ್ದಾನೆ.