IPL ಅನ್ನೋ ಅಖಾಡದಲ್ಲಿ ಹೆಚ್ಚೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ RCB, CSK ಮುಂಚೂಣಿಯಲ್ಲಿದೆ. ಉಭಯ ತಂಡಗಳ ಮ್ಯಾಚ್ ಅಂದ್ರೆ ಪಾಕ್ Vs ಇಂಡಿಯಾ ಅನ್ನೋ ರೀತಿ ಅಭಿಮಾನಿಗಳು ವೀಕ್ಷಿಸುತ್ತಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಸದಾ ನಾಲಿಗೆ ಹರಿಬಿಡುವ ಅಂಬಾಟಿ ರಾಯುಡು ಇದೇ ಮೊದಲ ಬಾರಿ ಯೂಟರ್ನ್ ಹೊಡೆದಿದ್ದಾರೆ. ಅದು ಸಹ ಈ ಸಲ ಆರ್ಸಿಬಿ ತಂಡ ಕಪ್ ಗೆಲ್ಲುತ್ತೆ ಎನ್ನುವ ಮೂಲಕ.
ಎಸ್, ನಾನು ಯಾವತ್ತೂ ಮುಂಚಿತವಾಗಿ ಆರ್ಸಿಬಿ ಪರ ಭವಿಷ್ಯ ನುಡಿದಿಲ್ಲ. ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುವ ನಿರೀಕ್ಷೆಯಿದೆ ಎಂದಿದ್ದಾರೆ. ಅಲ್ಲದೆ ಈ ಸಲ ಕಪ್ ಆರ್ಸಿಬಿ ತಂಡದ್ದು ಎನ್ನುವ ಮೂಲಕ ಗಮನ ಸೆಳೆದಿದ್ದಾರೆ.
ಇದೀಗ ಅಂಬಾಟಿ ರಾಯುಡು ಅವರ ಹೇಳಿಕೆಯು ವೈರಲ್ ಆಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರ್ಜರಿ ಪ್ರದರ್ಶನದ ಬೆನ್ನಲ್ಲೇ ರಾಯುಡು ಉಲ್ಟಾ ಹೊಡೆದಿದ್ದಾರೆ ಎಂದು ಆರ್ಸಿಬಿ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.
ಆರ್ಸಿಬಿ ಕಪ್ ಗೆಲ್ಲಬಾರದು ಎಂದಿದ್ದ ರಾಯುಡು:
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರನಾಗಿ ಅಂಬಾಟಿ ರಾಯುಡು ಇದಕ್ಕೂ ಮುನ್ನ ಆರ್ಸಿಬಿ ತಂಡ ಕಪ್ ಗೆಲ್ಲಬಾರದು ಎಂದಿದ್ದರು. ಎಸ್ ಬ್ರದಿನಾಥ್ ನಡೆಸಿದ ಚಿಟ್ ಚಾಟ್ನಲ್ಲಿ ಕಾಣಿಸಿಕೊಂಡಿದ್ದ ರಾಯುಡುಗೆ ಈ ಬಾರಿಯಾದರೂ ಆರ್ಸಿಬಿ ತಂಡದ ಕಾಯುವಿಕೆ ಕೊನೆಗೊಳ್ಳಲಿದೆಯಾ ಎಂದು ಪ್ರಶ್ನಿಸಲಾಗಿತ್ತು.
ಇದಕ್ಕೆ ನಗುತ್ತಾ ಉತ್ತರಿಸಿದ ರಾಯುಡು, ಈ ಸಲ ನನಗೆ ಆರ್ಸಿಬಿ ತಂಡ ಕಪ್ ಗೆಲ್ಲೋದು ಇಷ್ಟವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರುನಂತಹ ತಂಡ ಇರಬೇಕು. ಏಕೆಂದರೆ ನಿರೀಕ್ಷೆಗಳನ್ನು ಹೆಚ್ಚಿಸಿ ಅದನ್ನು ಪೂರೈಸಲು ವಿಫಲವಾಗುವ ತಂಡ ಇದ್ದರೇನೇ ಮನರಂಜನೆ ಸಿಗೋದು. ಹೀಗಾಗಿ ಆರ್ಸಿಬಿಯಂತಹ ತಂಡ ಐಪಿಎಲ್ನಲ್ಲಿ ಇರಬೇಕೆಂದು ನಾನು ಬಯಸುತ್ತೇನೆ ಎಂದಿದ್ದರು.