ಹರಿಯಾಣ: ಮನೆಯ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಒಂದೇ ಕುಟುಂಬದ ಏಳು ಸದಸ್ಯರು ಶವವಾಗಿ ಪತ್ತೆಯಾಗಿಯಾಗಿರುವ ಘಟನೆ ಹರಿಯಾಣದ ಪಂಚಕುಲದ ಸೆಕ್ಟರ್ 27ರಲ್ಲಿ ನಡೆದಿದೆ. ಮೃತರನ್ನು 42 ವರ್ಷದ ಪ್ರವೀಣ್ ಮಿತ್ತಲ್ ಎಂದು ಗುರುತಿಸಲಾಗಿದ್ದು, ಅವರ ಪೋಷಕರು, ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಮಗ ಎಂದು ಗುರುತಿಸಲಾಗಿದೆ.
ಹರಿಯಾಣದ ಪಂಚಕುಲದ ಸೆಕ್ಟರ್27ರಲ್ಲಿ ಸೋಮವಾರ ರಾತ್ರಿ ಕಾರೊಂದನ್ನು ಪಾರ್ಕ್ ಮಾಡಲಾಗಿತ್ತು. ಆ ಕಾರಿನಲ್ಲಿದ್ದ 6 ಮಂದಿ ಅಸ್ವಸ್ಥರಾಗಿ ಪರದಾಡುತ್ತಿದ್ದರು. ಕಾರಿನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ವಿಚಾರಿಸಿದಾಗ ಆತ, ನಾನು ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ. ಹಾಗಾಗಿ ನನ್ನ ಕುಟುಂಬದವರೆಲ್ಲರೂ ವಿಷ ಸೇವಿಸಿದ್ದೇವೆ. ಇನ್ನು 5 ನಿಮಿಷದಲ್ಲಿ ನಾನೂ ಸಾಯುತ್ತೇನೆ ಎಂದು ಹೇಳಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಸ್ಥಳೀಯರು ಕಾರಿನಲ್ಲಿದ್ದ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಪರಲ್ಲಾಗಲೇ 6 ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಇನ್ನು ಕಾರಿನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಸೆಕ್ಟರ್ 6ರ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಸಹ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.