ಕೆ.ಆರ್.ಪುರ: ಬಹಿರಂಗದ ಯಶಸ್ಸಿಗಿಂತ ಅಂತರಂಗದ ಶಾಂತಿ ಮುಖ್ಯವಾದುದು. ದೈವ ಚಿಂತನೆಯಿಂದ ಬದುಕು ಸರಳವಾಗುತ್ತದೆ ಎಂದು ಶ್ರೀ ಕ್ಷೇತ್ರ ಕೈವಾರ ಧರ್ಮಾಧಿಕಾರಿ ಡಾ. ಎಮ್.ಆರ್.ಜಯರಾಮ್ ಅಭಿಪ್ರಾಯಪಟ್ಟರು. ಕೆ.ಆರ್.ಪುರದಲ್ಲಿ ನಡೆದ ಸದ್ಗುರು ಶ್ರೀ ಯೋಗಿನಾರೇಯಣರ ಗುರುಪೂಜಾ ಕಾರ್ಯಕ್ರಮ ಪ್ರವಚನ ಮತ್ತು ಕೆ.ಆರ್ ಪುರ ಬಲಿಜ ವೆಲ್ ಫೇರ್ ಟ್ರಸ್ಟ್ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಶ್ರೀ ಕ್ಷೇತ್ರ ಕೈವಾರ ಧರ್ಮಾಧಿಕಾರಿ ಡಾ. ಎಮ್.ಆರ್.ಜಯರಾಮ್ ಅವರು,
ನೂರಾರು ವರ್ಷಗಳ ಹಿಂದೆ ಇದ್ದಂತಹ ಸಾಧು- ಸಂತ-ದಾಸರನ್ನು ಇಂದಿಗೂ ನೆನೆಸಿಕೊಳ್ಳುತ್ತೇವೆ.ಕಾರಣವೆಂದರೆ ಸಾಧುಸಂತರು ತಮಗಾಗಿ ಬದುಕಲಿಲ್ಲ. ಇಡೀ ಸಮಾಜಕ್ಕಾಗಿ ಜೀವನ ಸವೆಸಿದರು ಅವರ ಬದುಕು ನಮಗೆ ಪಾಠವಾಗಬೇಕು ಮನಸ್ಸಿನ ನಿಯಂತ್ರಣವಿಲ್ಲದೆ ಬದುಕಿನಲ್ಲಿ ಸುಖವಾಗಿರಲು ಸಾಧ್ಯವಿಲ್ಲ ಎಂದು ಸಾರಿದ ಕೈವಾರ ಯೋಗಿನಾರೇಯಣ ತಾತಯ್ಯನವರ ಬೋಧನೆಗಳು ನಮಗೆ ಮಾರ್ಗದರ್ಶನ ಎಂದರು. ಮಾನಸಿಕ ಸದೃಢತೆಗೆ ಕಾಲಜ್ಞಾನಿ ಕೈವಾರ ತಾತಯ್ಯನವರ ಚಿಂತನೆಗಳು ನಮಗೆ ಸದಾ ದಾರಿದೀಪ ಎಂದರು.
ಕಾಲಜ್ಞಾನಿ ಕೈವಾರ ತಾತಯ್ಯ,ವಿಜಯನಗರದ ಅರಸ ಕೃಷ್ಣದೇವರಾಯ, ವೈಚಾರಿಕ ಕ್ರಾಂತಿ ಮಾಡಿದ ರಾಮಸ್ವಾಮಿ ಪೆರಿಯಾರ್ ನಾಯ್ಕರ್, ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಪುಲೆ, ಜ್ಯೋತಿಬಾ ಪುಲೆ ಸೇರಿದಂತೆ ಬಲಿಜ ಸಮುದಾಯದ ಹಲವರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ನೆನೆದರು. ಭಕ್ತಿತತ್ವವನ್ನು ಯೋಗದೊಂದಿಗೆ ಅಳವಡಿಸಿ ಸಾಮಾನ್ಯರಿಗೂ ತಲುಪುವಂತೆ ಮಾಡಿದ ಕೀರ್ತಿ ಕೈವಾರದ ತಾತಯ್ಯನವರಿಗೆ ಸಲ್ಲುತ್ತದೆ. ಭಕ್ತಿ ಮತ್ತು ಯೋಗವನ್ನು ಸಮ ಸಮವಾಗಿ ತಾತಯ್ಯನವರು ಬೋಧಿಸಿದ್ದಾರೆ. ಭಕ್ತಿಯಲ್ಲಿಯೂ ಮೂಢಭಕ್ತಿಯಿಂದ ಶೀಘ್ರವಾಗಿ ಮುಕ್ತಿ ಸಿಗುವುದೆಂಬ ತತ್ವವನ್ನು ತಾತಯ್ಯನವರು ಬೋಧಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಮರ್ ಜ್ಯೋತಿ ಶಾಲೆಯ ಅಧ್ಯಕ್ಷ ಮೋಹನ್,ಸಮುದಾಯದ ಮುಖಂಡರಾದ ವೇಣುಗೋಪಾಲ, ಮೇಡಹಳ್ಳಿ ಜಗ್ಗಿ, ಅಂಜಿನಪ್ಪ, ಗಣೇಶ್, ಶಿವಪ್ಪ, ರವಿಕುಮಾರ್, ಗಜೇಂದ್ರ ಇದ್ದರು.