ವಾಷಿಂಗ್ಟನ್: ಅಮೆರಿಕಾದ 47ನೇ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಹಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದ್ದಾರೆ. ಅಮೆರಿಕಾದಲ್ಲಿರುವ ಅಕ್ರಮ ವಲಸಿಗರನ್ನು ವಿಶೇಷ ವಿಮಾನಗಳಲ್ಲಿ ಅವರ ಸ್ವದೇಶಗಳಿಗೆ ಕಳುಹಿಸುವ ಕೆಲಸಗಳು ನಡೆಯುತ್ತಿದೆ. ಇದಕ್ಕೆ ಕೆಲವು ದೇಶಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ.
ತಮ್ಮ ಪೌರರ ಕೈಗೆ ಕೋಳ ತೊಡಿಸಿ ವಾಪಸ್ ಕರೆತರುತ್ತಿರುವುದನ್ನು ಬ್ರೆಜಿಲ್ ಖಂಡಿಸಿದೆ. ಇನ್ನೂ ಕೊಲಂಬಿಯಾ ಸಹ ಮೊದಲಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ವಲಸಿಗರನ್ನು ಕರೆತರುವ ಅಮೆರಿಕಾ ವಿಮಾನಗಳನ್ನು ನಮ್ಮ ದೇಶಕ್ಕೆ ಬಿಟ್ಟುಕೊಳ್ಳಲ್ಲ ಎಂದಿತ್ತು. ಗೌರವದಿಂದ ಕಳಿಸಿಕೊಟ್ಟರೆ ಮಾತ್ರ ಒಪ್ಪುತ್ತೇವೆ ಎಂದು ಶರತ್ತು ವಿಧಿಸಿತ್ತು.
ಇದಕ್ಕೆ ಗರಂ ಆದ ಟ್ರಂಪ್, ಕೊಲಂಬಿಯಾ ಉತ್ಪನ್ನಗಳ ಮೇಲೆ ಶೇಕಡಾ 50 ಸುಂಕ ಹೆಚ್ಚಿಸುವ ಘೋಷಣೆ ಮಾಡಿದ್ದರು. ಅಲ್ಲದೇ, ಕೊಲಂಬಿಯಾ ಅಧಿಕಾರಿಗಳ ವೀಸಾ ರದ್ದು ಮಾಡುವ ಬೆದರಿಕೆ ಹಾಕಿದ್ದರು. ಈ ಬೆನ್ನಲ್ಲೇ ಕೊಲಂಬಿಯಾ ಅಧ್ಯಕ್ಷರು ಉಲ್ಟಾ ಹೊಡೆದರು. ಸ್ವದೇಶಕ್ಕೆ ವಾಪಸ್ ಆಗುವ ಅಕ್ರಮ ವಲಸಿಗರನ್ನು ಬಿಟ್ಟುಕೊಳ್ಳುವುದಾಗಿ ತಿಳಿಸಿದರು. ತಕ್ಷಣವೇ ಟ್ರಂಪ್ ಸಹ ತಮ್ಮ ಘೋಷಣೆಯನ್ನು ಹಿಂಪಡೆದರು. ಈ ಮಧ್ಯೆ, ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಪೊಲೀಸರು ನ್ಯೂಯಾರ್ಕ್, ನ್ಯೂಜೆರ್ಸಿಯ ಗುರುದ್ವಾರಗಳಿಗೆ ನುಗ್ಗಿದ್ದಾರೆ. ಇದಕ್ಕೆ ಸಿಖ್ಖರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.