ಆರ್ಥಿಕ ಅಗತ್ಯದ ಸಮಯದಲ್ಲಿ ಸಾಲ ಪಡೆಯಲು ಸಹಾಯ ಮಾಡುವ ಅಮೂಲ್ಯ ಆಸ್ತಿ ಚಿನ್ನ ಎಂದು ಎಲ್ಲರಿಗೂ ತಿಳಿದಿದೆ. ಅನೇಕ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು ಚಿನ್ನದ ಮೇಲೆ ಸಾಲ ನೀಡುತ್ತವೆ. ತುರ್ತು ಪರಿಸ್ಥಿತಿಯಲ್ಲಿ ನಗದು ಬೇಕಾದರೆ, ಚಿನ್ನದ ಮೂಲಕ ಸಾಲ ಪಡೆಯುವುದು ಸುಲಭ.
ವ್ಯಾಪಕವಾದ ದಾಖಲೆಗಳು ಮತ್ತು ಕ್ರೆಡಿಟ್ ಪರಿಶೀಲನೆಗಳನ್ನು ಒಳಗೊಂಡಿರುವ ವೈಯಕ್ತಿಕ ಸಾಲಗಳಿಗಿಂತ ಭಿನ್ನವಾಗಿ, ಚಿನ್ನದ ಸಾಲವನ್ನು ಪಡೆಯುವುದು ಸುಲಭ. ನ್ಯಾಯಯುತ ಸಾಲ ನೀತಿಗಳನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನದ ಸಾಲಗಳನ್ನು ನಿಯಂತ್ರಿಸುತ್ತದೆ.
ಸಾಲದಾತರು ಸಾಲದ ಮೌಲ್ಯದ ಅನುಪಾತದ ಆಧಾರದ ಮೇಲೆ ಸಾಲದ ಮೊತ್ತವನ್ನು ನಿರ್ಧರಿಸುತ್ತಾರೆ. ಚಿನ್ನದ ಅಡಮಾನ ಸಾಲದ ಬಡ್ಡಿ ದರ ವಿವಿಧ ಬ್ಯಾಂಕ್ಗಳಲ್ಲಿ ವ್ಯತ್ಯಾಸವಿರುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುವ ಐದು ಬ್ಯಾಂಕ್ಗಳ ವಿವರ ಇಲ್ಲಿದೆ.
ಇಂಡಿಯನ್ ಬ್ಯಾಂಕ್
ಇಂಡಿಯನ್ ಬ್ಯಾಂಕ್ ಶೇಕಡಾ 7ರ ಫ್ಲೋಟಿಂಗ್ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುತ್ತಿದೆ. ಇದಕ್ಕೆ ಶೇಕಡಾ 0.056ರ ಪ್ರೊಸೆಸಿಂಗ್ ಶುಲ್ಕ ಇರುತ್ತದೆ. ಇಲ್ಲಿ ಫ್ಲೋಟಿಂಗ್ ಬಡ್ಡಿ ದರ ಅಂದರೆ ಬದಲಾಗುವ ಬಡ್ಡಿದರ. ಆರ್ಬಿಐ ರೆಪೊ ದರಕ್ಕೆ ಅನುಗುಣವಾಗಿ ಅಥವಾ ಬೇರೆ ಕಾರಣಗಳಿಗಾಗಿ ಬ್ಯಾಂಕ್ ಈ ಬಡ್ಡಿ ದರವನ್ನು ಪರಿಷ್ಕರಿಸಬಹುದು. ಹೀಗೆ ಬ್ಯಾಂಕ್ ಬಡ್ಡಿ ದರ ಪರಿಷ್ಕರಿಸಿದರೆ ಹೊಸ ಬಡ್ಡಿ ದರಬವನ್ನೇ ಗ್ರಾಹಕರು ಪಾವತಿಸಬೇಕಾಗುತ್ತದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶೇಕಡಾ 7.10 ರಿಂದ 7.20ರ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುತ್ತಿದೆ. ಸಾಲದ ಒಟ್ಟು ಮೊತ್ತದ ಶೇಕಡಾ 0.75ರ ಪ್ರೊಸೆಸಿಂಗ್ ಶುಲ್ಕ ಇರುತ್ತದೆ.
ಯೂನಿಯನ್ ಬ್ಯಾಂಕ್
ಯೂನಿಯನ್ ಬ್ಯಾಂಕ್ ಶೇಕಡಾ 7.25 ರಿಂದ 7.50ರ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುತ್ತದೆ. ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ.
ಯುಸಿಒ ಬ್ಯಾಂಕ್
ಯುಸಿಒ ಬ್ಯಾಂಕ್ ಶೇಕಡಾ 7.40 ರಿಂದ 7.90ರ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುತ್ತದೆ. 250 ರೂಪಾಯಿಯಿಂದ ಗರಿಷ್ಠ 5000 ರೂ.ವರೆಗೆ ಪ್ರೊಸೆಸಿಂಗ್ ಶುಲ್ಕ ಇರುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್
ಎಚ್ಡಿಎಫ್ಸಿ ಬ್ಯಾಂಕ್ ಶೇಕಡಾ 7.60 ರಿಂದ 16.81ರ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುತ್ತದೆ. ಸಾಲದ ಮೊತ್ತದ ಶೇಕಡಾ 1ರಷ್ಟು ಪ್ರೊಸೆಸಿಂಗ್ ಶುಲ್ಕ ಇರುತ್ತದೆ.