ಬೆಂಗಳೂರು:- ಸದಾ ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಿದ್ದ ಯತ್ನಾಳ್ ಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಸರಿಯಾಗಿ ಪಾಠ ಕಲಿಸಿದೆ. ಪಕ್ಷದಿಂದ 6 ವರ್ಷ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದ್ದು, ಪಕ್ಷದ ಕೆಲವರಿಗೆ ಇದು ಖುಷಿ ತರಿಸಿದೆ.
ಇನ್ನೂ ಪಕ್ಷದಿಂದ ಉಚ್ಚಾಟನೆಯಾದ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ X ಮಾಡಿರುವ ಯತ್ನಾಳ್, ನಾನು ಪಕ್ಷದ ಒಳಗಿನ ಸರ್ವಾಧಿಕಾರತ್ವ, ಭ್ರಷ್ಟಾಚಾರ ಬಗ್ಗೆ ಮಾತಾಡಿದ್ದಕ್ಕೆ, ಏಕವ್ಯಕ್ತಿ ಆಡಳಿತವನ್ನು ತೆಗೆದುಹಾಕಿ ಮತ್ತು ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ವಿನಂತಿಸಿದ್ದಕ್ಕಾಗಿ ಪಕ್ಷವು ನನ್ನನ್ನು 6 ವರ್ಷಗಳ ಕಾಲ ಉಚ್ಚಾಟಿಸಿದೆ.
ಪಕ್ಷದ ಒಳಗಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅಜೆಂಡಾ ಯಶಸ್ವಿಯಾಗಿ ಸಾಧಿಸಿಕೊಂಡಿವೆ. ಈ ಉಚ್ಚಾಟನೆಯಿಂದ ನಾನು ನನ್ನ ಹೋರಾಟ ನಿಲ್ಲಿಸಲ್ಲ, ಕುಂದಲ್ಲ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ವಿರುದ್ಧ ಹಾಗೂ ಹಿಂದುತ್ವ ಮತ್ತು ಉತ್ತರ ಕರ್ನಾಟಕ ಪರ ನನ್ನ ಹೋರಾಟ ನಿರಂತರ.
ಎಲ್ಲಾ ಕಾರ್ಯಕರ್ತರಿಗೆ, ಹಿತೈಷಿಗಳಿಗೆ, ಸ್ನೇಹಿತರಿಗೆ, ಪರಿಚಯಸ್ಥರಿಗೆ, ಸ್ವಾಮೀಜಿಗಳಿಗೆ, ಮಾಧ್ಯಮಗಳಿಗೆ, ಬೆಂಬಲದ ಆಧಾರಸ್ತಂಭವಾಗಿರುವ ನನ್ನ ಕುಟುಂಬಕ್ಕೆ ಮತ್ತು ಸರ್ವಶಕ್ತನಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಇದನ್ನು ಬರೆಯುವಾಗ, ಪುರಂದರ ದಾಸರು ಹೇಳಿದ್ದನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ.
ಸತ್ಯವಂತರಿಗಿದು ಕಾಲವಲ್ಲ.. ದುಷ್ಟಜನರಿಗೆ ಸುಭಿಕ್ಷಕಾಲ.. ಉಪಕಾರ ಮಾಡಿದರೆ ಅಪಕರಿಸುವ ಕಾಲ.. ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ.. ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ.. ಸತ್ಯವಂತರಿಗಿದು ಕಾಲವಲ್ಲ ಎಂದು ಯತ್ನಾಳ್ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ.