ಹಾವೇರಿ : ಯಾರೇ ಆದರೂ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧವಾಗಿರಬೇಕು ಎಂದು ಯತ್ನಾಳ್ ಉಚ್ಚಾಟನೆ ವಿಚಾರವಾಗಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಹಳ ದುರಷ್ಟಕರ, ಪಕ್ಷ ಈಗ ಒಳ್ಳೆಯ ನಿರ್ಧಾರ ಮಾಡಿದೆ. ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದವಾಗಿರಬೇಕು. ಪಕ್ಷದ ಒಳಗೆ ಇದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಇನ್ನೇನು ಮಾಡಬೇಕು. ಎರಡು ಬಾರಿ ನೋಟೀಸ್ ನೀಡಿದ್ದರು. ಆದರೂ ತಿದ್ದಿಕೊಳ್ಳಲಿಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು, ನಾನು ಹೋದರು ಪಕ್ಷಕ್ಕೆ ಏನೋ ಆಗಲ್ಲ. ಪಕ್ಷ ದೊಡ್ಡದು, ಪಕ್ಷ ನಿಂತ ನೀರಲ್ಲ ಹರಿಯುವ ನೀರು ಎಂದಿದ್ದಾರೆ.
ಇನ್ನೂ, ವಿಜಯೇಂದ್ರ ರಾಜ್ಯಾಧ್ಯಕ್ಷ ಮಾಡಿದ್ದು ಹೈಕಮಾಂಡ್, ಯಡಿಯೂರಪ್ಪ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಹಿರಿಯರು ಅವರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದು, ಮಾತು ಎತ್ತಿದ್ದರೆ ಅಪ್ಪ ,ಮಕ್ಕಳು ಅಂತಾರೆ, ಹೊಂದಾಣಿಕೆ ರಾಜಕಾರಣ ಅಂತಾರೆ ಎಂದು ಯತ್ನಾಳ ವಿರುದ್ದ ಕಿಡಿಕಾರಿದರು.
ಮೃತ್ಯುಂಜಯ ಸ್ವಾಮೀಜಿ ಯತ್ನಾಳ ಪರ ಮಾತನಾಡಿದ ವಿಚಾರವಾಗಿ ಮಾತನಾಡಿ, ಸ್ವಾಮೀಜಿ ಧರ್ಮ ಕಾರ್ಯ ಮಾಡಬೇಕು, ನಾವು ರಾಜಕಾರಣ ಮಾಡಬೇಕು. ನಮ್ಮ ಕೆಲಸ ನಾವು ಮಾಡಬೇಕು, ಅವರ ಕೆಲಸ ಅವರು ಮಾಡಬೇಕು ಎಂದು ತಿರುಗೇಟು ನೀಡಿದರು.