ಚಿಕ್ಕಮಗಳೂರು: ವರದಕ್ಷಿಣೆಗಾಗಿ ಪತಿಯೇ ಪತ್ನಿಯ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕಮಗಳೂರಿನ ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಘಟನೆ ನಡೆದಿದೆ.
ಮಮತಾ ಮೃತರಾಗಿದ್ದು, ಆಕೆಯನ್ನು 4 ವರ್ಷಗಳ ಹಿಂದೆ ಅವಿನಾಶ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ 110 ಗ್ರಾಂ ಚಿನ್ನವನ್ನು ನೀಡಲಾಗಿತ್ತು. ಆದರೆ ಹಣಕ್ಕಾಗಿ ಮಮತಾಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಮಮತಾ ತವರು ಮನೆ ಸೇರಿದ್ದರು. ಆದರೆ ಎಲ್ಲರೂ ಸೇರಿ ರಾಜಿಪಂಚಾಯ್ತಿ ಮಾಡಿಸಿದ ಬಳಿಕ ಮತ್ತೆ ಗಂಡನ ಜೊತೆಗೆ ತೆರಳಿದ್ದರು.
ಆದರೆ ಜ.25ರಂದು ಮಮತಾಗೆ ಪಿಡ್ಸ್ ಬಂದಿದೆ ಎಂದು ಅವಿನಾಶ್ ಆಸ್ಪತ್ರೆಗೆ ದಾಖಲಿಸಿದ್ದ. ಎರಡು ತಿಂಗಳಿಂದ ಮಮತಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆಕೆ ಹುಷಾರಾಗುವ ಮುನ್ನವೇ ಗಂಡನ ಮನೆಯವರು ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆಗೆ ಕರೆದುಕೊಂಡು ಬಂದ ಬಳಿಕ ಆಕೆ ಸಾವನ್ನಪ್ಪಿದ್ದಾಳೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
ಸದ್ಯ ಮಮತಾ ಗಂಡ, ಅತ್ತೆ ಹಾಗೂ ಮಾವನ ವಿರುದ್ಧ ಮೃತ ಮಮತಾ ಮನೆಯವರು ದೂರು ನೀಡಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.