ಗಂಡ ಹೆಂಡತಿ ಜಗಳ ಅಂದರೆ ಉಂಡು ಮಲಗೋ ತನಕ ಅಂತಾರೆ ಆದರೆ ದರ್ಶನ್ ವಿಷಯದಲ್ಲಿ ತುಸು ಜಾಸ್ತಿನೇ ಅನ್ನಬಹುದು. ದರ್ಶನ್-ವಿಜಯಲಕ್ಷ್ಮೀ ಸಂಸಾರದ ವಿರಸ ಜೈಲು ತನಕ ಹೋಗಿ ಬಂದಿದೆ. ಇದೆಲ್ಲಾ ಮುಗಿದು ಹೋದ ಅಧ್ಯಾಯ. ಪತಿ ದಾಸನನ್ನು ಶತಪ್ರಯತ್ನ ಮಾಡಿ ವಿಜಯಲಕ್ಷ್ಮೀ ಜೈಲಿನಿಂದ ಹೊರತಂದು ಈಗ ಅಭಿಮಾನಿಗಳ ಕಣ್ಣಿಗೆ ಸಾಕ್ಷಾತ್ ಲಕ್ಷ್ಮಿಯಂತೆ ಗೋಚರಿಸುತ್ತಿದ್ದಾರೆ. ಫ್ಯಾನ್ಸ್ ಗೆ ಅತ್ತಿಗೆ ಲಕ್ಷ್ಮಿಯಾದ್ರೆ ದರ್ಶನ್ ಅವರಿಗೆ ಪತ್ನಿ ಮುದ್ದು ರಾಕ್ಷಸಿಯಂತೆ. ಹೀಗಂತ ನಾವು ಹೇಳ್ತಿಲ್ಲ. ಸ್ವತಃ ದರ್ಶನ್ ಪತ್ನಿಯನ್ನು ಮುದ್ದು ರಾಕ್ಷಸಿ ಅಂತಾ ಕರೆದಿದ್ದಾರೆ.
ದಚ್ಚು ಆತ್ಮೀಯ ಧನ್ವೀರ್ ನಟನೆಯ ವಾಮನ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿರುವ ದರ್ಶನ್, ‘ನಾನು ಧನ್ವೀರ್ ಅವರನ್ನು ಬೇರೆ ಬೇರೆ ರೀತಿ ನೋಡಿದ್ದೇನೆ. ‘ಬಜಾರ್’ ಸಿನಿಮಾದಲ್ಲಿ ಒಂದು ರೀತಿ ನೋಡಿದೆ, ‘ಬೈಟು ಲವ್’ ಚಿತ್ರದಲ್ಲಿ ಬೇರೆ ರೀತಿ ನೋಡಿದೆ. ಅವರ ‘ಕೈವ’ ಸಿನಿಮಾ ನನಗೆ ತುಂಬ ಇಷ್ಟವಾಗಿತ್ತು. ಈಗ ವಾಮನ ನೋಡುತ್ತೇವೆ. ಈ ನಾಲ್ಕು ಸಿನಿಮಾಗಳಲ್ಲಿ ಖುಷಿ ವಿಷಯ ಏನೆಂದರೆ ಎಲ್ಲಿಯೂ ರಿಪೀಟ್ ಇಲ್ಲ. ನಾಲ್ಕು ಸಬ್ಜೆಕ್ಟ್ ಕೂಡ ಬೇರೆ ಬೇರೆ ರೀತಿ ಇದೆ. ಈಗ ‘ವಾಮನ’ ತಾಯಿ ಸೆಂಟಿಮೆಂಟ್ ಇರುವ ಸಿನಿಮಾ. ತಾಯಿಗಾಗಿ, ಪ್ರೀತಿಗಾಗಿ ಒಬ್ಬ ಹೇಗೆಲ್ಲ ಬದಲಾಗುತ್ತಾನೆ ಎಂಬುದು ಇದರಲ್ಲಿದೆ ಎಂದಿದ್ದಾರೆ.
‘ದಯಮಾಡಿ ಕನ್ನಡ ಸಿನಿಮಾಗಳನ್ನು ಬೆಳೆಸಿ. ಯಾಕೆಂದರೆ, ಎಲ್ಲರೂ ಎಲ್ಲ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆದರೆ ನಾವು ಕೆಲವರು ಮಾತ್ರ ಕನ್ನಡಕ್ಕೆ ಸೀಮಿತ ಎಂದುಕೊಂಡಿರುತ್ತೇವೆ. ಕನ್ನಡ ಸಿನಿಮಾ ನೋಡಲಿಲ್ಲ ಎಂದರೆ ನಾವು ಇಲ್ಲಿಂದ ಬಿಟ್ಟು ಬೇರೆ ಕಡೆಗೆ ಹೋಗಲ್ಲ. ನೀವು ಕೊಟ್ಟ ಆಶೀರ್ವಾದದಿಂದ ತೋಟ, ಹಸು ಮಾಡಿಕೊಂಡಿದ್ದೇವೆ. ಯಾವತ್ತಿದ್ದರೂ ನಾವು ಕನ್ನಡದಲ್ಲೇ ಸಿನಿಮಾ ಮಾಡುವುದು. ಈ ಚಿತ್ರರಂಗ ಬಿಟ್ಟು ನಮಗೆ ಬೇರೆ ಗೊತ್ತಿಲ್ಲ’ ಎಂದಿದ್ದಾರೆ ಚಾಲೆಂಜಿಂಗ್ ಸ್ಟಾರ್.
ವಾಮನ ಚಿತ್ರದಲ್ಲಿ ನನಗೆ ಮುದ್ದು ರಾಕ್ಷಸಿ ಹಾಡು ತುಂಬಾ ಇಷ್ಟ. ಎಲ್ಲಿಂದ ಈ ಹಾಡನ್ನು ಹುಡುಕಿ ತಂದೆ ಅಪ್ಪಿ ತುಂಬಾ ಚೆನ್ನಾಗಿದೆ ಅಂತ ನಾನೇ ಧನ್ವೀರ್ಗೆ ಕೇಳ್ತಾ ಇರ್ತಿನಿ ಎಂದು ಹೇಳಿದ್ದಾರೆ. ನನ್ನ ಹೆಂಡತಿ ಕೋಪ ಮಾಡಿಕೊಂಡಾಗ ನಾನು ಮುದ್ದು ರಾಕ್ಷಸಿ ಥರ ಇದ್ದೀಯಾ ಕಣೇ ನೀನು ಅಂತ ರೇಗಿಸುತ್ತಿರುತ್ತೇನೆ ಎಂದು ಹೇಳಿದ್ದಾರೆ. ವಾಮನ ಸಿನಿಮಾದ ಮುದ್ದು ರಾಕ್ಷಸಿ ಹಾಡು ಸೂಪರ್ ಡೂಪರ್ ಹಿಟ್ ಆಗಿದೆ. ಅಜನೀಶ್ ಲೋಕನಾಥ್ ಹಾಡಿಗೆ ಟ್ಯೂನ್ ಹಾಕಿದ್ದು, ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿದ್ದು, ವಿಜಯ್ ಪ್ರಕಾಶ್ ಮತ್ತು ಹರ್ಷಿಕಾ ದೇವನಾಥ್ ಹಾಡಿದ್ದಾರೆ, ಕಳೆದ ವಾರದ ಹಿಂದಷ್ಟೇ ವಾಮನ ಚಿತ್ರದ ಕಂದ ಕನಸ ರೂಪ ತಾಯಿ ಹಾಡನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದರು.