ಯುವ ಸಂಸದ ತೇಜಸ್ವಿ ಸೂರ್ಯ ಮದುವೆ ಬಳಿಕ ಪತ್ನಿ ಶಿವಶ್ರೀ ಸ್ಕಂದ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದೆ. ಪ್ರಧಾನಿ ಭೇಟಿಯಾಗಿ ನವದಂಪತಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಇದೇ ವೇಳೆ ತೇಜಸ್ವಿ-ಶಿವಶ್ರೀ ಜೋಡಿಗೆ ಮೋದಿ ಅವರಿಗೆ ವಿಶೇಷ ಉಡುಗೊರೆ ಸಹ ಸಿಕ್ಕಿದೆ. ಮೋದಿ ಭೇಟಿಯಾದ ಸುಂದರ ಕ್ಷಣದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ತೇಜಸ್ವಿ ಸೂರ್ಯ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ನಾವು ಪ್ರಧಾನಿ ಅವರಿಗೆ ಶ್ರೀಮಧ್ವಾಚಾರ್ಯರು ರಚಿಸಿದ ಸುಮಾರು 750 ವರ್ಷಗಳಷ್ಟು ಹಳೆಯದಾದ ಸರ್ವಮೂಲ ಗ್ರಂಥದ ಹಸ್ತಪ್ರತಿಯನ್ನು ಉಡುಗೊರೆಯಾಗಿ ನೀಡಲಾಗಿದೆ. ಇದನ್ನು ಶತಮಾನಗಳವರೆಗೆ ಹಸ್ತಪ್ರತಿಗಳನ್ನು ಸಂರಕ್ಷಿಸಲು ಸಹಾಯ ಮಾಡುವ ಅತ್ಯಾಧುನಿಕ ವೇಫರ್ಫಿಚೆ ತಂತ್ರಜ್ಞಾನವನ್ನು ಬಳಸಿಕೊಂಡು ಸಂರಕ್ಷಿಸಲಾಗಿದೆ. ವೇಫರ್ಫಿಚೆ ಒಂದು ಪೇಟೆಂಟ್ ಪಡೆದ ಅರೆವಾಹಕ ಉತ್ಪಾದನಾ ಆಧಾರಿತ ತಂತ್ರಜ್ಞಾನ ಎಂದು ಹೇಳಿದ್ದಾರೆ.
ನಾವು ಪ್ರಧಾನಿಯವರಿಗೆ ಅರ್ಪಿಸಿದ ಈ ಪ್ರಾಚೀನ ಹಸ್ತಪ್ರತಿಯನ್ನು ನನ್ನ ಕ್ಷೇತ್ರದ ತಾರಾ ಪ್ರಕಾಶನ ಎಂಬ ಸರ್ಕಾರೇತರ ಸಂಸ್ಥೆಯು ಈ ಆಧುನಿಕ ರೂಪದಲ್ಲಿ ಸಂರಕ್ಷಿಸಿದೆ. ಅವರು ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಇದನ್ನು ಕಂಡ ಪ್ರಧಾನಿ ಅವರು ಉತ್ಸಾಹಿ ವಿದ್ಯಾರ್ಥಿಯಂತೆ ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆಯ ಈ ಪ್ರಕ್ರಿಯೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು. ನಮ್ಮ ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವ ಅಗತ್ಯವನ್ನು ಕೂಡ ವಿವರಿಸಿದರು ಎಂದು ತೇಜಸ್ವಿ ಸೂರ್ಯ ಸೋಷಿಯಲ್ ಮೀಡಿಯಾದಲ್ಲಿ ವಿವರಿಸಿದ್ದಾರೆ.