ಬೆಂಗಳೂರು: ಬಿಬಿಎಂಪಿಯು 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 5,210 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಈವರೆಗೆ 4604 ಕೋಟಿ ರೂ (ಶೇ 88.36) ವಸೂಲಾಗಿದೆ. ಇಂದು ಬಾಕಿ ಆಸ್ತಿ ತೆರಿಗೆ ಪಾವತಿಸದಿದ್ದರೆ ಡಬಲ್ ಹಣ ದಂಡದ ರೂಪದಲ್ಲಿ ಪಾವತಿಸಬೇಕಿದೆ.
ಆಸ್ತಿ ತೆರಿಗೆ ಪಾವತಿಗೆ ಕೊನೆಯ ದಿನವಾಗಿರುವ ಕಾರಣ ಬಿಬಿಎಂಪಿ ಕಂದಾಯ ಇಲಾಖೆ ಕಚೇರಿಗೆ ರಂಜಾನ್ ರಜೆ ರದ್ದುಗೊಳಿಸಲಾಗಿದೆ. ರಾತ್ರಿ 11 ರ ವರೆಗೆ ಬಿಬಿಎಂಪಿ ಕಂದಾಯ ಇಲಾಖೆ ಕಚೇರಿ ತೆರೆದಿರಲಿದ್ದು, ಆಸ್ತಿ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ.
Happy Ramadan Eid 2025: ರಂಜಾನ್ ಹಬ್ಬದ ಮಹತ್ವ, ಇತಿಹಾಸ ಆಚರಣೆಯ ವಿಧಾನ ಹೀಗಿದೆ ನೋಡಿ..!
ಒಂದು ವೇಳೆ ಗಡುವಿನ ಒಳಗೆ ಆಸ್ತಿ ತೆರಿಗೆ ಪಾವತಿಸಲು ವಿಫಲರಾದರೆ, ಏಪ್ರಿಲ್ 1 ರಿಂದ ದುಪ್ಪಟ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಅದೆ ಜತೆಗೆ, ಶೇ 9 ರ ಬಡ್ಡಿ ಸಹ ಪಾವತಿಸಬೇಕಾಗುತ್ತದೆ. ಬಿಬಿಎಂಪಿ ಕಾಯ್ದೆಯಲ್ಲಿ ತಿದ್ದುಪಡಿ ಹಿನ್ನೆಲೆ ಡಬಲ್ ತೆರಿಗೆ ಪಾವತಿಸಬೇಕಾಗುತ್ತದೆ.
ಸದ್ಯ ಪಾಲಿಕೆಗೆ 400 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಬರಬೇಕಿದೆ. ಇವುಗಳಲ್ಲಿ ಕೆಲವು ಸರ್ಕಾರಿ ಕಟ್ಟಡಗಳ ಆಸ್ತಿ ತೆರಿಗೆ ಕೂಡ ಬಾಕಿ ಇದೆ ಎನ್ನಲಾಗಿದೆ. ತೆರಿಗೆ ಬಾಕಿ ಪಾವತಿಸಿಲ್ಲ ಎಂದಾದರೆ ಮುಂದಿನ ದಿನಗಳಲ್ಲಿ ಆಸ್ತಿ ಹರಾಜು ಹಾಕುವ ಸಾಧ್ಯತೆಯೂ ಇದೆ.
ತೆರಿಗೆ ಪಾವತಿಸದವರ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದೇವೆ. ತೆರಿಗೆ ಮೊತ್ತ ವಶಪಡಿಸಿಕೊಳ್ಳುವುದು ಮತ್ತು ಆಸ್ತಿ ಹರಾಜು ಮಾಡುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿಯ ಕಂದಾಯ ವಿಶೇಕ್ಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.