ಬೆಂಗಳೂರು: ನಂದಿನಿ ಹಾಲಿನ ದರವನ್ನು ೪ ರೂ.ಏರಿಕೆ ಮಾಡಿ ಜನರಿಗೆ ಬರೆ ಹಾಕಿದ್ದೇ ಹಾಕಿದ್ದು. ಒಂದು ಕಸಕ್ಕೆ ಟ್ಯಾಕ್ಸ್, ಮತ್ತೊಂದು ಕಡೆ ಡೀಸೆಲ್ ದರ 2 ರೂ. ಹೆಚ್ಚಳ. ಇದರ ಜೊತೆಗೆ ನಂದಿನಿ ಹಾಲಿನ ದರವೂ ಲೀಟರ್ ಗೆ 4ರೂ. ಹೆಚ್ಚಳವಾಗಿದೆ.
ಏಪ್ರಿಲ್.1ರಿಂದಲೇ ನಂದಿನಿ ಹಾಲಿನ ದರ ಏರಿಕೆಯಾಗಿದೆ. ಆದರೆ ವಾಸ್ತವದಲ್ಲಿ ನಂದಿನಿ ಹಾಲಿನ ದರ 4 ರೂ. ಏರಿಕೆಯಾಗಿಯೇ ಇಲ್ಲ. ಇದಕ್ಕೆ ಕೆಎಂಎಫ್ ಹೊಸ ಐಡಿಯಾವನ್ನು ಮಾಡಿದೆ.
ನಂದಿನಿ ಹಾಲಿನ ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ಭಾರಿ ಹೋರಾಟಗಳು ನಡೆದ್ವು. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕ್ತಿದೆ.
ಹೌದು, ಕಳೆದ ವರ್ಷದ ಜೂನ್ ಹೊತ್ತಿಗೆ ರಾಜ್ಯದಲ್ಲಿ ನಂದಿನಿ ಹಾಲಿನ ಸಂಗ್ರಹ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು. ರೈತರಿಂದ ಭಾರಿ ಪ್ರಮಾಣದಲ್ಲಿ ಹಾಲು ಡೈರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೆಎಂಎಫ್ ತಲೆ ಮೇಲೆ ಕೈಹೊತ್ತುಕೊಳ್ಳುವಂತೆ ಮಾಡಿತ್ತು. ನಿತ್ಯ ಸಂಗ್ರಹವಾಗುತ್ತಿದ್ದ ಹಾಲಿಗೆ ಬೇಡಿಕೆ ಕಡಿಮೆಯಾಗಿ ಕೆಎಂಎಫ್ ನಿತ್ಯ ನಷ್ಟ ಅನುಭವಿಸುತ್ತು.
ಆಗ, ಕೆಎಂಎಫ್ ಕಂಡುಕೊಂಡ ದಾರೀನೆ ಬೆಲೆ ಹೆಚ್ಚಳ. ಕಳೆದ ವರ್ಷದ ಅಂದರೆ 2024ರ ಜೂನ್ 26ರಂದು ನಂದಿನಿ ಹಾಲಿನ ದರವನ್ನು ಲೀಟರ್ ಗೆ ಕೆಎಂಎಫ್ 2ರೂ. ಹೆಚ್ಚಳ ಮಾಡಿತ್ತು. ಆದರೆ, 2 ರೂ.ಗೆ ಹೆಚ್ಚುವರಿಯಾಗಿ 50ಎಂ.ಎಲ್ ಹಾಲು ನೀಡೋದಾಗಿ ಭರವಸೆ ನೀಡಿತ್ತು. ಅದರಂತೆ ಅರ್ಧ ಲೀಟರ್ ಹಾಗೂ 1 ಲೀಟರ್ ಪ್ಯಾಕ್ ನಲ್ಲಿ 50 ಎಂಎಲ್ ಹಾಲನ್ನ ಹೆಚ್ಚುವರಿಯಾಗಿ ನೀಡುತ್ತಾ ಬಂದಿದೆ.
ನಂದಿನಿ ಹೊಸ ಐಡಿಯಾ ?
ಮೊದಲೇ 2ರೂ. ಹೆಚ್ಚಳದಿಂದ ಕಂಗೆಟ್ಟಿದ್ದ ಜನತೆ, ಇದೀಗ ಮತ್ತೆ ಲೀಟರ್ ಗೆ 4 ರೂ. ಹೆಚ್ಚಳ ಮಾಡಿದ್ದು ಕೊತ ಕೊತ ಕುದಿಯುವಂತೆ ಮಾಡಿದೆ. ಹೀಗಾಗಿ ಕೆಎಂಎಫ್ ಜನರ ಆಕ್ರೋಶದಿಂದ ಪಾರಾಗಲು ಹೊಸ ಐಡಿಯಾ ಮಾಡಿದೆ.
ಅದೇ, 4 ರೂ. ಹೆಚ್ಚಳ ಬದಲು ಕೇವಲ ಲೀಟರ್ ಹಾಲಿಗೆ 2ರೂ. ಮಾತ್ರ ಹೆಚ್ಚಳ ಮಾಡಿದೆ. ಆದರೆ, ಕಳೆದ ವರ್ಷ 50 ಎಂಎಲ್ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನೂ ಈಗ ನಿಲ್ಲಿಸಲಾಗಿದೆ. ಈಗ ಕೇವಲ 500 ಎಂಎಲ್ ಹಾಗೂ 1 ಲೀಟರ್ ಹಾಲನ್ನು ಪ್ಯಾಕ್ ಮಾಡಿ ಕೆಎಂಎಫ್ ನಂದಿನಿ ಹಾಲನ್ನ ಪೂರೈಕೆ ಮಾಡುತ್ತಿದೆ.
ಹೀಗಾಗಿ ನಂದಿನಿ ಹಾಲು ಲೀಟರ್ ಗೆ 4 ರೂಪಾಯಿ ಹೆಚ್ಚಳವಾಗಿದೆಯಲ್ಲಾ ಅಂತ ನೋವಿನಲ್ಲೇ ಹಾಲು ತರಲು ಹೋದ ಗ್ರಾಹಕರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಲೀಟರ್ ಹಾಲು 4ರೂ. ಹೆಚ್ಚಳ ಆಗಿಲ್ಲ. ಆದರೆ, 2ರೂ ಹೆಚ್ಚಳ ಆಗಿದೆಯಲ್ವಾ ಅಂತ ಜನ ನೆಮ್ಮದಿಯಿಂದ ಬರುತ್ತಿದ್ದಾರೆ.
ಆದರೆ, ಕೆಎಂಎಫ್ ರಂಗೋಲಿ ಕೆಳಗೆ ದೂರಿದ ರೀತಿ ಹಾಲಿನ ಪ್ರಮಾಣ ಕಡಿಮೆ ಮಾಡಿ ಜನರ ಆಕ್ರೋಶದಿಂದ ಬಚಾವಾಗುವ ಪ್ರಯತ್ನ ಮಾಡಿದೆ. ಆದರೇನು, ನಂದಿನಿ ಹಾಲಿನ ದರ ಹೆಚ್ಚಳ ಮಾಡುವ ನಿರ್ಧಾರ ಘೋಷಣೆ ಮಾಡುವ ಮೊದಲು ಸರ್ಕಾರ ಹಾಗೂ ಕೆಎಂಎಫ್ ಸರಿಯಾದ ಮಾಹಿತಿ ನೀಡಿದೆ ಜನರಿಂದ ಉಗಿಸಿಕೊಂಡಿದ್ದು ಮಾತ್ರ ವಿಪರ್ಯಾಸ.