ಬೆಂಗಳೂರು:- ಗ್ಯಾರಂಟಿ ಯೋಜನೆಗಳು ಜಾರಿ ಆಗ್ತಿದ್ದಂತೆ ಫ್ರೀ ಫ್ರೀ ಅಂತ ಖುಷಿ ಪಟ್ಟಿದ್ದ ಜನರು ಇದೀಗ ಬೆಲೆ ಏರಿಕೆಗೆ ಬೇಸತ್ತಿದ್ದಾರೆ. ದುಬಾರಿ ದುನಿಯಾದಲ್ಲಿ ಬೆಲೆಗಳು ಗಗನಕ್ಕೇರಿದೆ. ಹಾಲು, ವಿದ್ಯುತ್, ಟ್ರೋಲ್ ದರ ಏರಿಕೆಯ ಜೊತೆಗೆ ಕಸಕ್ಕೆ ಸೆಸ್ ಕೂಡ ಕಟ್ಟಬೇಕಿದೆ. ಗ್ಯಾರಂಟಿ ಯೋಜನೆಗಳ ಅಸೆ ತೋರಿಸಿ ಸಿಎಂ ಸಿದ್ದರಾಮಯ್ಯ ಅವರು ಬೆಲೆ ಏರಿಕೆ ಬರೆ ಎಳೆದಿದ್ದಾರೆ ಎಂದು ಜನರು ಹಿಡಿ ಶಾಪ ಹಾಕ್ತಿದ್ದಾರೆ.
ಹೀಗಾಗಿ ಬೆಲೆ ಏರಿಕೆ ವಿರುದ್ಧ ಕೇಸರಿ ರಣಕಹಳೆ ಮೊಳಗಿಸಿದ್ದು ಅಹೋರಾತ್ರಿ ಧರಣಿ ಮುಕ್ತಾಯವಾಗಿದೆ.
ನಗರದ ಫ್ರೀಡಂ ಪಾರ್ಕಿನಲ್ಲಿ ಬುಧವಾರದಿಂದ ಬಿಜೆಪಿ ನಡೆಸುತ್ತಿದ್ದ ಅಹೋರಾತ್ರಿ ಧರಣಿಯಲ್ಲಿ ಇಂದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪಾಲ್ಗೊಂಡಿದ್ದರು. ನಾಯಕರೆಲ್ಲ ಮಾತಾಡಿದ ಮೇಲೆ ಯಡಿಯೂರಪ್ಪ ಮುಂದಾಳತ್ವದಲ್ಲಿ ಸಿಎಂ ಮನೆ ಮುತ್ತಿಗೆಗೆ ನಾಯಕರು, ಕಾರ್ಯಕರ್ತರು ಮುಂದಾದರು. ಪ್ರತಿಭಟನಾ ಸ್ಥಳದಿಂದ ಯಡಿಯೂರಪ್ಪ ಜೊತೆಗೆ ನಾಯಕರು, ಕಾರ್ಯಕರ್ತರು ರಸ್ತೆಗೆ ಇಳಿದರು. ಆದರೆ ಅಷ್ಟರೊಳಗೆ ನಾಕಾಬಂದಿ ಹಾಕಿದ್ದ ಪೊಲೀಸರು ಪ್ರತಿಭಟನಾಕಾರರನ್ನು ರಸ್ತೆಯಲ್ಲೇ ಎರಡು ಬದಿ ತಡೆದು ಸಿಎಂ ಮನೆ ಮುತ್ತಿಗೆ ವಿಫಲಗೊಳಿಸಿದರು.
ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್ಗಳ ಮೇಲೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ, ಡಿಸಿಎಂ ಹಾಗೂ ಸಚಿವರ ಫೋಟೋ ಇದ್ದ ರಾವಣನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಕಾರ್ಯಕರ್ತೆಯರು ಎಮ್ಎಲ್ಸಿ ಭಾರತಿ ಶೆಟ್ಟಿ ನೇತೃತ್ವದಲ್ಲಿ ರಸ್ತೆಯಲ್ಲೇ ಕೂತು ಪ್ರತಿಭಟನೆಗೆ ಮುಂದಾದರು. ಕೊನೆಗೆ ಪೊಲೀಸರು ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್, ಸಿ.ಟಿ ರವಿ, ಎಸ್.ಆರ್ ವಿಶ್ವನಾಥ್, ಬೈರತಿ ಬಸವರಾಜು ಮುಂತಾದ ನಾಯಕರನ್ನು ವಶಕ್ಕೆ ಪಡೆದು ಬಸ್ ಮೂಲಕ ಕರೆದೊಯ್ದರು
ಇನ್ನು ಪ್ರತಿಭಟನೆ ನಡೆಯುವಾಗಲೇ ವಕ್ಫ್ ಬಿಲ್ ಪಾಸಾದ ಹಿನ್ನೆಲೆಯಲ್ಲಿ ನಾಯಕರು ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಒಟ್ಟಾರೆಯಾಗಿ ಎರಡು ದಿನಗಳ ಅಹೋರಾತ್ರಿ ಹೋರಾಟ ಮೂಲಕ ಸರ್ಕಾರಕ್ಕೆ ಬಿಜೆಪಿ ತಕ್ಕ ಮಟ್ಟಿಗೆ ಬಿಸಿ ಮುಟ್ಟಿಸಿದೆ.