ಹುಬ್ಬಳ್ಳಿ : ಹಾಲು, ಮೊಸರು ಸೇರಿದಂತೆ ಪೆಟ್ರೋಲ್ ಡಿಸೇಲ್ ದರ ಏರಿಕೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಗೋಕುಲ ರಸ್ತೆಯಲ್ಲಿನ ಅಕ್ಷಯ ಪಾರ್ಕ್ ಬಳಿರಸ್ತೆ ತಡೆದು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ದಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕರು, ಹಿರಿಯ ನಾಯಕರು, ಬಿಜೆಪಿ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಇದೇ ವೇಳೆ ಮಾತನಾಡಿದ ಮಹೇಶ್ ಟೆಂಗಿನಕಾಯಿ, ರಾಜ್ಯದಲ್ಲಿ ಇನ್ಮುಂದೆ ಅಭಿವೃದ್ಧಿ ಆಗುವುದೇ ಇಲ್ಲ, ಕೇವಲ ಬೆಲೆ ಏರಿಕೆ ಮಾತ್ರ. ಈಗ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷವೂ ಹಾಲಿನ ದರವನ್ನು 3 ರೂ ಹೆಚ್ಚಳ ಮಾಡಿದ್ದರು. ಮಕ್ಕಳ ಕುಡಿಯುವ ಹಾಲಿನ ದರವನ್ನೂ ಈ ಸರ್ಕಾರ ಹೆಚ್ಚಿಸಿದೆ ಎಂದು ರಾಜ್ಯ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.