ಮಲಯಾಳಂನ ಎಂಪುರಾನ್ ಸಿನಿಮಾವೀವ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ. ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದರ ಹೊರತಾಗಿ ‘ಎಂಪುರಾನ್’ ಚಿತ್ರದಲ್ಲಿ ಹಿಂದೂ ವಿರೋಧಿ ದೃಶ್ಯಗಳು ಇದೆ ಎಂಬ ಆರೋಪ ವ್ಯಕ್ತವಾಗಿತ್ತು. ಇದು ಬಿಜೆಪಿಯವರ ಕಣ್ಣು ಕೆಂಪು ಮಾಡಿತ್ತು. ಈ ಕಾರಣಕ್ಕೆ ಬರೋಬ್ಬರಿ 24 ಕಡೆಗಳಲ್ಲಿ ಕತ್ತರಿ ಹಾಕಲಾಗಿತ್ತು. ಈ ಘಟನೆ ಬೆನ್ನಲ್ಲೇ ಚಿತ್ರದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಗೆ ಐಟಿ ನೋಟಿಸ್ ಕಳಿಸಲಾಗಿದೆ ಎನ್ನಲಾಗುತ್ತಿದೆ.
ನಿನ್ನೆಯಷ್ಟೇ ಎಂಪುರಾನ್ ಚಿತ್ರದ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್ ಅವರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದರು. ವಿದೇಶಿ ವಿನಿಯಮದಲ್ಲಿ ನಿಯಮ ಉಲ್ಲಂಘನೆ ಆಗಿದೆ ಅವರನ್ನು ವಿಚಾರಣೆ ನಡೆಸಲಾಗಿತ್ತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಪೃಥ್ವಿರಾಜ್ ಅವರಿಗೆ ಐಟಿ ಇಲಾಖೆ ನೋಟಿಸ್ ನೀಡಲಾಗಿದೆಯಂತೆ.
ಎಂಪುರಾನ್ ಚಿತ್ರ ಬಿಡುಗಡೆಯಾದ ಎರಡು ಮೂರು ದಿನದಲ್ಲಿಯೇ ಪೃಥ್ವಿರಾಜ್‌ಗೆ ಐಟಿ ಇಲಾಖೆ ನೋಟಿಸ್ ನೀಡಿದ್ದು ಈ ಹಿಂದೆ ಅವರ ನಿರ್ಮಾಣದ ಚಿತ್ರಗಳ ಆದಾಯದ ಕುರಿತು ಲೆಕ್ಕವನ್ನು ನೀಡುವಂತೆ ಕೇಳಿದೆ ಎನ್ನಲಾಗುತ್ತಿದೆ. ಏಪ್ರಿಲ್ ಅಂತ್ಯದವರೆಗೆ ಪೃಥ್ವಿರಾಜ್‌ಗೆ ಗಡುವು ನೀಡಲಾಗಿದೆಯಂತೆ.
ಮಲಯಾಳಂ ಚಿತ್ರರಂಗದಲ್ಲಿ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಾಗೂ ವಿತರಕನಾಗಿ ಹೆಸರು ಮಾಡಿದ್ದಾರೆ. ಮಲಯಾಳಂನದಲ್ಲಿ ಕನ್ನಡದ ಕೆಜಿಎಫ್, ಕಾಂತಾರ, ಚಾರ್ಲಿ777 ಚಿತ್ರಗಳನ್ನು ಇವರೇ ವಿತರಣೆ ಮಾಡಿದ್ದರು.