ಬೆಂಗಳೂರು/ ಮಂಡ್ಯ:- ಮಾಜಿ ಸಂಸದೆ ಸುಮಲತಾ ಅವರು ಮಂಡ್ಯದಲ್ಲಿ ಹೊಸ ಮನೆ ಕಟ್ಟೋದಾಗಿ ಹೇಳಿಕೆ ಕೊಟ್ಟಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ವೇಳೆ ಈ ಬಗ್ಗೆ ಹೇಳಿರುವ ಸುಮಲತಾ, ಮಂಡ್ಯದಲ್ಲಿ ಮೊದಲಿಂದಲೂ ಮನೆ ಇದೆ. ಇತ್ತೀಚೆಗೆ ಬಾಡಿಗೆ ಮನೆಗೆ ಹೋದಗಿದ್ದೇನೆ ಅಷ್ಟೇ, ಮನೆ ಶಿಫ್ಟ್ ಮಾಡಿದ್ದೇನೆ ಅಷ್ಟೇ. ಹಿಂದಿನ ಮನೆಯವರಿಗೆ ಆ ಮನೆ ಬೇಕಿತ್ತು, ಹಾಗಾಗಿ ಮನೆ ಶಿಫ್ಟ್ ಮಾಡಿದ್ದೇನೆ. ಮಂಡ್ಯದಲ್ಲಿ ಮನೆ ಯಾವತ್ತೂ ಇದ್ದೇ ಇರುತ್ತೆ. ನಮ್ಮ ಸೈಟ್ ನಲ್ಲೂ ಒಂದು ಚಿಕ್ಕ ಮನೆ ಕಟ್ಬೇಕು ಅಂತ ಪ್ಲ್ಯಾನ್ ಮಾಡ್ತಿದ್ದೇವೆ ಎಂದರು.
ಇದೇ ವೇಳೆ ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿ ಅಂತರ ಆರೋಪ ವಿಚಾರವಾಗಿ ಮಾತನಾಡಿ, ನಾನು ಅಂತರ ಕಾಯ್ದುಕೊಂಡಿಲ್ಲ.ನನಗೆ ಮೊಮ್ಮಗ ಬಂದಿದ್ದಾನೆ ಈಗ, ಕುಟುಂಬದ ಜತೆ ಸ್ವಲ್ಪ ಸಮಯ ಕಳೀಬೇಕಿದೆ. ಹಾಗಾಗಿ ಒಂದು ಹೆಜ್ಜೆ ಹಿಂದೆ ಇಟ್ಟಿದ್ದೇನೆ. ನಾನು ಪಕ್ಷದಿಂದ ದೂರ ಆಗಿಲ್ಲ ಎಂದರು.
ಇದೇ ವೇಳೆ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿ,ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಮಲತಾ ವಾಗ್ದಾಳಿ ಮಾಡಿದ್ದಾರೆ. ಜನಸಾಮಾನ್ಯರು ಎದುರಿಸ್ತಿರುವ ಅತೀ ದೊಡ್ಡ ಸಮಸ್ಯೆ ಬೆಲೆ ಏರಿಕೆ. ಭಾಗ್ಯಗಳನ್ನು ಕೊಟ್ಟಿದೀವಿ ಅಂತ ಹೇಳುವ ಮೂಲಕ ಜನರನ್ನು ಏಮಾರಿಸುವ ಕೆಲಸ ನಡೀತಿದೆ. ಇದರ ವಿರುದ್ಧ ನಾವೆಲ್ಲ ದನಿ ಎತ್ತಲೇಬೇಕು. ಜನರಿಗೆ ದರ ಏರಿಕೆ ಬಿಸಿ ತಟ್ಟಿದೆ ಎಂದರು.
ಬಿಜೆಪಿ ಹೋರಾಟಗಳಿಂದ ಜೆಡಿಎಸ್ ಅಂತರ ವಿಚಾರವಾಗಿ ಮಾತನಾಡಿ, ಮೈತ್ರಿ ಯಾವತ್ತೂ ಸವಾಲಿನ ಜತೆಗೆ ಇರುತ್ತೆ.. ಒಂದೇ ಪಕ್ಷದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಇರ್ತವೆ, ಇದು ಎಲ್ಲ ಪಕ್ಷಗಳಲ್ಲೂ ಇರುತ್ತೆ. ಎರಡು ಪಕ್ಷ ಮೈತ್ರಿ ಮಾಡಿಕೊಂಡಾಗ ಸವಾಲು ಇದ್ದೇ ಇರುತ್ತೆ. ಸರಿಯಾಗಿ ನಿರ್ವಹಣೆ ಮಾಡಿಕೊಂಡು ಹೋಗುವ ಜವಾಬ್ದಾರಿ ಯಾರಿಗಿದೆಯೋ ಅವರು ಅದನ್ನು ಮಾಡ್ತಾರೆ ಎಂದರು.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ ವಿಚಾರವಾಗಿ ಮಾತನಾಡಿ, ಪಕ್ಷದಲ್ಲಿ ವರಿಷ್ಠರುಇದ್ದಾರೆ, ಅವರು ಅದನ್ನು ನೋಡ್ಕೋತಾರೆ. ಹಲವಾರು ನಾಯಕರು ಪಕ್ಷ ಕಟ್ಟಿದವರು ಇದ್ದಾರೆ. ಅವರು ಅದರ ಬಗ್ಗೆ ಯೋಚನೆ ಮಾಡ್ತಾರೆ. ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ ಎಂದರು.