ರಾಜ್ಯದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ಭಕ್ತರಿಗೆ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇದೇ ತಿಂಗಳ 12ನೇ ತಾರೀಖಿನಿಂದ ಬೆಂಗಳೂರು ಕುಕ್ಕೆ ಸುಬ್ರಹ್ಮಣ್ಯ ಮಧ್ಯೆ ಹೊಸ ರೈಲು ಸಂಚರಿಸಲಿದ್ದು, ದಿನಕ್ಕೆ ನಾಲ್ಕು ಬಾರಿ ಸಂಚಾರ ನಡೆಸಲಿದೆ ಎಂದು ಘೋಷಿಸಿದ್ದಾರೆ.
ತುಮಕೂರಿನಲ್ಲಿ ರೈಲ್ವೆ ಗೇಟ್ ಮೇಲ್ಸತುವೆಗೆ ಗುದ್ದಲಿ ಪೂಜೆ ನಡೆಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಇದ್ದತಂಹ 33 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳನ್ನ ನಾವು ಕೈಗೆತ್ತಿಕೊಂಡಿದ್ದೇವೆ. ಇದೇ 11 ರಂದು ಹಾವೇರಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲಿಗೆ ಚಾಲನೆ ಕೊಡುತ್ತಿದ್ದೇವೆ. ಮುಂದಿನ 15 ದಿನಗಳಲ್ಲಿ ಗದಗ, ವಾಡಿ, ಕುಷ್ಠಗಿ, ಯಲಬುರ್ಗಾ ರೈಲು ಸಂಚಾರ ಲೋಕಾರ್ಪಣೆ ಮಾಡುತ್ತೇವೆ. ಅನೇಕ ರೈಲ್ವೆ ಯೋಜನೆಗಳನ್ನು ಲೋಕಾರ್ಪಣೆ ಮಾಡುವಂತಹ ಕೆಲಸ ಈಗಾಗಲೇ ಆಗಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಬಂದ ಮೇಲೆ ರೈಲ್ವೆ ಇಲಾಖೆಗೆ ಒಂದು ಕಾಯಕಲ್ಪ ಕೊಟ್ಟಿದ್ದಾರೆ ಎಂದು ಸೋಮಣ್ಣ ಹೇಳಿದರು.