ದೇವನಹಳ್ಳಿ: ಕೆಐಎಡಿಬಿ ಭೂಸ್ವಾಧೀನ ಕೈಬಿಡುವಂತೆ ಒತ್ತಾಯಿಸಿ ಸಾವಿರಾರು ದಿನಗಳಿಂದ ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿ ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ಧರಣಿ ನಡೆಸುತ್ತಿದ್ದ ರೈತರು ಸಚಿವ ಕೆ.ಹೆಚ್ ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿ, ಪೊಲೀಸರು ತಡೆದ ಹಿನ್ನೆಲೆ ವಿಷಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ ಘಟನೆ ನಡೆದಿದೆ.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಿಂದ ಬೆಂಗಳೂರಿನಲ್ಲಿರುವ ಸಚಿವ ಕೆ.ಹೆಚ್ ಮುನಿಯಪ್ಪ ಮನೆಗೆ ಹೊರಟಿದ್ದ ನೂರಾರು ರೈತರನ್ನು ಪೊಲೀಸರು ತಡೆದಿದ್ದಾರೆ. ಬಸ್ ಮೂಲಕ ಧರಣಿ ಸ್ಥಳದಿಂದ ಹೊರಟಿದ್ದ ನೂರಾರು ರೈತರನ್ನ ತಡೆದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತರು ಚನ್ನರಾಯಪಟ್ಟಣ-ದೇವನಹಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.
ವಿಷ ಸೇವಿಸಿದ ಅನ್ನದಾತರು
ಚನ್ನರಾಯಪಟ್ಟಣ ಗ್ರಾಮದಲ್ಲಿ 777 ಎಕರೆ ಭೂಮಿಯನ್ನು ಕೆಐಎಡಿಬಿ ಭೂಸ್ವಾಧೀನ ಮಾಡುತ್ತಿರುವುದನ್ನು ವಿರೋಧಿಸಿ ಸಾವಿರಾರು ದಿನಗಳಿಂದ ಹೋರಾಟ ನಡೆಸುತ್ತಿದ್ದ ರೈತರು
ಭೂಸ್ವಾಧೀನ ಕೈಬಿಡುವಂತೆ ಆಗ್ರಹಿಸಲು ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದರು. ರೈತರು ಹೊರಟಿದ್ಸಬಸ್ ತಡೆದ ಹಿನ್ನೆಲೆಯಲ್ಲಿ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ರೈತರನ್ನು ರಸ್ತೆಯಲ್ಲಿಯೇ ತಡೆದಿದ್ದಕ್ಕೆ ಆಕ್ರೋಶಗೊಂಡ ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಕುಡಿದು ರೈತ ವೆಂಕಟೇಶ್ ಅಸ್ವಸ್ಥತರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.