ಕೆಲವರು ಎಷ್ಟೇ ದಪ್ಪನೆಯ ಹಾಸಿಗೆ ಇದ್ದರೂ ನೆಲದ ಮೇಲೆ ಮಲಗುವುದಕ್ಕೆ ಇಷ್ಟಪಡುತ್ತಾರೆ. ಮಧ್ಯಾಹ್ನವಾಗಲಿ, ರಾತ್ರಿಯಾಗಲಿ ಚೊಕ್ಕದಾದ ನೆಲದ ಮೇಲೆ ಹಾಯಾಗಿ ಮಲಗುವವರನ್ನು ನಾವು ನೋಡಿರುತ್ತೇವೆ. ಅದರಲ್ಲಿಯೂ ಈ ಬೇಸಿಗೆಯಲ್ಲಿ ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡಿರುವವರು ಪ್ರತಿಯೊಬ್ಬರ ಮನೆಯಲ್ಲಿಯೂ ಇರಬಹುದು. ಕೆಲವರಿಗಂತೂ ಹಾಸಿಗೆಯ ಮೇಲೆ ಮಲಗಿದರೆ ಮೈ- ಕೈ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅವರು ನೆಲದ ಮೇಲೆ ಸುಖವಾಗಿ ನಿದ್ರೆ ಮಾಡಲು ಬಯಸುತ್ತಾರೆ.
ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1: ರಾಯರೆಡ್ಡಿ ವಿರುದ್ಧ ಕ್ರಮ ಪಕ್ಕಾ ಅಂತೆ !
ನಿದ್ದೆ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ದೇಹದ ಆರೋಗ್ಯ ಕಾಪಾಡಿಕೊಳ್ಳಲು, ಮಾನಸಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ನಿದ್ದೆ ಅಗತ್ಯವಾಗಿದೆ. ಇಡೀ ದಿನ ಎಷ್ಟೇ ಕೆಲಸ ಮಾಡಿದ್ದರೂ ರಾತ್ರಿ ಕಣ್ತುಂಬ ನಿದ್ದೆ ಮಾಡಿದರೆ ಮರುದಿನ ಮತ್ತೆ ಹೊಸ ಚೈತನ್ಯ, ಹೊಸ ಉತ್ಸಾಹ ದೇಹದಲ್ಲಿ ಕಾಣಬಹುದು. ಹೀಗಾಗಿ ಪ್ರತೀ ಆರೋಗ್ಯವಂತ ವ್ಯಕ್ತಿಗೆ ಕನಿಷ್ಠ 8 ರಿಂದ 9 ಗಂಟೆಗಳ ನಿದ್ದೆ ಅಗತ್ಯವಾಗಿದೆ. ಕೆಲವೊಮ್ಮೆ ಹೇಗೆ ಮಲಗಿದರೂ ನಿದ್ದೆ ಬರುವುದಿಲ್ಲ. ಕೆಲವರಿಗೆ ಎಸಿ ಇಲ್ಲದೆ ನಿದ್ದೆ ಬರದಿದ್ದರೆ, ಇನ್ನೂ ಕೆಲವರಿಗೆ ಮೆತ್ತನೆಯ ಹಾಸಿಗೆ ಇಲ್ಲದೆ ನಿದ್ದೆ ಬರದು.
ನಿಮಗೆ ಗೊತ್ತಾ ನಿದ್ದೆ ಮಾಡುವ ಶೈಲಿಯಿಂದಲೂ ಒಂದಷ್ಟು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಅರೇ ಇದೇನಿದು ಅಂತೀರಾ? ಹೌದು ಬೆಡ್ ಮೇಲೆ, ಎಸಿ ರೋಮ್ನಲ್ಲಿ ಮಲಗಿ ನಿದ್ದೆ ಮಾಡುವುದಕ್ಕಿಂತ ನೆಲಕ್ಕೆ ಹಾಸಿಗೆ ಹಾಕಿಕೊಂಡು ಮಲಗಿ ನಿದ್ದೆ ಮಾಡುವುದರಿಂದ ಅನೇಕ ಲಾಭಗಳಿವೆ. ಆ ಬಗ್ಗೆ ತಿಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರಾ. ಕೆಲವೇ ಕೆಲವು ಮಂದಿಗೆ ನೆಲಕ್ಕೆ ಮಲಗುವ ಅಭ್ಯಾಸವಿರುತ್ತದೆ. ಇದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ನೆಲದ ಮೇಲೆ ಮಲಗಿದರೆ ಯಾವೆಲ್ಲಾ ರೀತಿಯ ಆರೋಗ್ಯ ಉತ್ತಮವಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಬಹುತೇಕ ಮಂದಿ ಬೆಚ್ಚನೆಯ ಹಾಗೂ ಮೆತ್ತನೆಯ ಸ್ಪಂಜಿನ ಹಾಸಿಗೆಯನ್ನೇ ಇಷ್ಟಪಡುತ್ತಾರೆ. ಆದರೆ ಆ ರೀತಿಯ ಹಾಸಿಗೆಯಲ್ಲಿ ಮಲಗುವುದರಿಂದ ಮೈಕೈ ನೋವು ಬರುವ ಸಾಧ್ಯತೆ ಹೆಚ್ಚು. ಆದರೆ ನೆಲದ ಮೇಲೆ ಮಲಗುವುದರಿಂದ ಬೆನ್ನು ನೋವಿನಂತಹ ಸಮಸ್ಯೆ ನಿವಾರಣೆಯಾಗುತ್ತದೆ. ತಂಪಾದ ನೆಲದಲ್ಲಿ ಚಾಪೆ ಅಥವಾ ತೆಳ್ಳನೆಯ ಬಟ್ಟೆಯನ್ನು ಹಾಸಿ ಮಲಗಿದರೆ ಬೇಸಿಗೆಯಲ್ಲಿ ಕಣ್ತುಂಬ ನಿದ್ದೆಯನ್ನೂ ಪಡೆಯಬಹುದು. ಆರೋಗ್ಯವನ್ನೂ ಉತ್ತಮವಾಗಿಸಿಕೊಳ್ಳಬಹುದು. ಮೊಣಕಾಲುಗಳು ಕೆಳಗೆ ಒಂದು ದಿಂಬನ್ನು ಇರಿಸಿಕೊಳ್ಳಿ. ಇದು ನಿಮ್ಮ ಬೆನ್ನಿನ ಮೇಲೆ ಹೆಚ್ಚು ನೈಸರ್ಗಿಕ ಕರ್ವ್ ಅನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ.
ಹೌದು ಬೆನ್ನು, ಸೊಂಟದ ನೋವಿದ್ದರೆ ಮಲಗುವ ವಿಧಾನ ಬೇರೆಯಾಗುತ್ತದೆ. ಅದೇ ರೂಢಿಯಾದರೆ ದೇಹದ ಆಕಾರವೇ ಬದಲಾಗುವ ಸಾಧ್ಯೆಗಳಿರುತ್ತದೆ. ಆದ್ದರಿಂದ ಪ್ರತಿದಿನ ನೆಲಕ್ಕೆ ಮಲಗುವುದರಿಂದ ಬೆನ್ನು ನೋವು ನಿವಾರಣೆಯಾಗುತ್ತದೆ. ಜೊತೆಗೆ ಆರಾಮದಾಯಕ ನಿದ್ದೆ ಬರುತ್ತದೆ. ಈಗಂತೂ ಬೇಸಿಗೆ ಹೀಗಾಗಿ ತಣ್ಣನೆಯ ನೆಲ ಹಿತವಾದ ಅನುಭವ ನೀಡಿ ನಿದ್ದೆಯನ್ನು ಆವರಿಸಿಕೊಳ್ಳುವಂತೆ ಮಾಡುತ್ತದೆ. ಅಲ್ಲದೆ ನೆಲದ ಮೇಲಿನ ಹಾಸಿಗೆಯ ಮೇಲೆ ಮಲಗುವುದರಿಂದ ಬೆನ್ನು ಮೂಳೆ ಕೂಡ ಬಲವಾಗುತ್ತದೆ.
ಹೆಚ್ಚಿನ ಜನರಿಗೆ ರಾತ್ರಿ ಮಲಗಿ ಎಷ್ಟು ಹೊತ್ತಾದರೂ ನಿದ್ದೆ ಬರುವುದಿಲ್ಲ. ನಿದ್ರಾಹೀನತೆ ಸಮಸ್ಯೆಗೆ ಹಲವು ಕಾರಣಗಳಿರಬಹುದು. ಒತ್ತಡದ ಜೀವನ, ಆಹಾರ ಪದ್ಧತಿ ಇತ್ಯಾದಿ. ಆದರೆ ಕೆಲವೊಂದು ಅಧ್ಯಯನಗಳ ಪ್ರಕಾರ ನಿದ್ರಾಹೀನತೆಗೆ ಮಲಗುವ ಭಂಗಿ ಮತ್ತು ಹಾಸಿಗೆ ಕೂಡ ಕಾರಣವಾಗುತ್ತದೆ. ನೆಲದ ಮೇಲಿನ ಹಾಸಿಗೆಯಲ್ಲಿ ಮಲಗುವುದರಿಂದ ಹೆಚ್ಚು ಆಹ್ಲಾದತೆ ಹೊಂದಿ ನಿದ್ದೆ ಬೇಗ ಬರುತ್ತದೆ ಎನ್ನುತ್ತದೆ ಕೆಲವು ಅಧ್ಯಯನಗಳು. ಆದ್ದರಿಂದ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ನೆಲದ ಮೇಲೆ ಹಾಸಿಗೆಯನ್ನು ಹಾಕಿ ಮಲಗುವುದನ್ನು ಅಭ್ಯಸಿಸಿಕೊಳ್ಳಿ. ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ಕಂಡುಕೊಳ್ಳಬಹುದು.
ಸ್ಪಂಜ್ನ ಹಾಸಿಗೆಯ ಬಳಕೆಯಿಂದ ದೇಹದಲ್ಲಿ ಉಷ್ಣತೆ ಜಾಸ್ತಿಯಾಗುತ್ತದೆ. ಆದರೆ ನೆಲದ ಮೇಲೆ ಮಲಗುವುದರಿಂದ ಭೂಮಿಯ ಅಥವಾ ನೆಲದ ತಂಪು ದೇಹಕ್ಕೆ ಆವರಿಸಿ ದೇಹವೂ ತಂಪಾಗುತ್ತದೆ. ಕಾಡುವ ದೇಹದ ಅತಿಯಾದ ಹೀಟ್ನಿಂದ ನಿದ್ದೆಯ ಸಮಸ್ಯೆಯಾಗುತ್ತಿದ್ದರೆ ಸರಳವಾದ ಪರಿಹಾರ ನೆಲಕ್ಕೆ ಮಲಗುವುದಾಗಿದೆ. ಹಿಂದಿನ ಕಾಲದಲ್ಲಿ, ಅಷ್ಟೇ ಯಾಕೆ ಈಗಲೂ ಹಳ್ಳಿಗಳ ಕೆಲವು ಮನೆಗಳಲ್ಲಿ ಹಿರಿಯರು ನೆಲದ ಮೇಲೆಯೇ ಮಲಗುವ ಅಭ್ಯಾಸವನ್ನು ಇಟ್ಟುಕೊಂಡಿದ್ದಾರೆ. ಹಳೇ ಜೀವಗಳ ಆರೋಗ್ಯದ ಗುಟ್ಟು ಇದೂ ಒಂದು ಎಂದರೆ ತಪ್ಪಾಗದು.
ನೆಲದ ಮೇಲೆ ಹಾಸಿಗೆಯ ಹಾಕಿ ಮಲಗುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ ಎನ್ನಲಾಗುತ್ತದೆ. ನೆಲದ ಮೇಲೆ ಮಲಗುವುದರಿಂದ ಸ್ನಾಯುಗಳು ಸಡಿಲಗೊಂಡು ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ. ಮೂಳೆಗಳಲ್ಲೂ ಬಲವರ್ಧನೆಯಾಗಿ ದೇಹದಲ್ಲಿ ಆರೋಗ್ಯಕರ ವ್ಯವಸ್ಥೆಯನ್ನು ಕಾಪಾಡಲು ನೆಲದ ಮೇಲೆ ಮಲಗುವ ಪ್ರಕ್ರಿಯೆ ನೆರವಾಗುತ್ತದೆ. ಆದರೆ ನೆನಪಿಡಿ ನೆಲದ ಮೇಲೆ ಮಲಗುವಾಗ ತುಸು ಬೆಚ್ಚಿಗಿನ ಹೊದಿಕೆಯಿರಲಿ ಇಲ್ಲವಾದರೆ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ದೇಹದ ಪ್ರಕೃತಿಗೆ ಅನುಗುಣವಾಗಿ ನೆಲದ ಮೇಲೆ ಮಲಗುವ ಅಭ್ಯಾಸ ಮಾಡಿಕೊಳ್ಳಿ. ಇಲ್ಲವಾದರೆ ಶೀತ, ನೆಗಡಿ, ಅಸ್ತಮಾದಂತಹ ಸಮಸ್ಯೆಗಳು ಕಾಡಬಹುದು.