ಬೆಂಗಳೂರು:- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ IPL ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯವಾಗಿ ಸೋತಿದೆ.
ಈ ರಾಶಿಯವರ ಭಾಗ್ಯ ಎನ್ನಬೇಕೋ ಪುಣ್ಯ ಎನ್ನಬೇಕೋ ಬಯಸಿದೆಲ್ಲ ಸಿಗುವುದು: ಶುಕ್ರವಾರದ ರಾಶಿ ಭವಿಷ್ಯ 11 ಏಪ್ರಿಲ್ 2025
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 163 ರನ್ ಗಳಿಸಿತು. ತಂಡದ ಪರ ಟಿಮ್ ಡೇವಿಡ್ ಅಜೇಯ 37 ರನ್ ಗಳಿಸಿದರೆ, ಫಿಲ್ ಸಾಲ್ಟ್ 37 ರನ್, ರಜತ್ ಪತಿದಾರ್ 25 ಮತ್ತು ಕೊಹ್ಲಿ 22 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ವಿಪ್ರಾಜ್ ನಿಗಮ್ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.5 ಓವರ್ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಡೆಲ್ಲಿ ಪರ ಕೆಎಲ್ ರಾಹುಲ್ ಅಜೇಯ 93 ರನ್ ಗಳಿಸಿದರೆ, ಟ್ರಿಸ್ಟಾನ್ ಸ್ಟಬ್ಸ್ ಅಜೇಯ 38 ರನ್ ಗಳಿಸಿದರು.
ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಹೈ ಸ್ಕೋರಿಂಗ್ ಪಂದ್ಯಗಳಿಗೆ ಹೆಸರುವಾಸಿಯಾಗಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ಕೂಡ ಅದಕ್ಕೆ ತಕ್ಕಂತೆ ಶುರು ಮಾಡಿತು. ಫಿಲ್ ಸಾಲ್ಟ್ 3ನೇ ಓವರ್ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ಗನಲ್ಲಿ 30 ರನ್ ಸಿಡಿಸಿದರು. ಇವರ ಆರ್ಭಟಕ್ಕೆ ಮೊದಲ ಮೂರು ಓವರ್ಗಳಲ್ಲಿ ಆರ್ಸಿಬಿ ಸ್ಕೋರ್ 53 ಇತ್ತು. ಆದರೆ 4ನೇ ಓವರ್ನಲ್ಲಿ ಫಿಲ್ ಸಾಲ್ಟ್ ರನ್ಔಟ್ ಆಗುವುದರೊಂದಿಗೆ ಆರ್ಸಿಬಿಯ ಆರ್ಭಟ ಅಂತ್ಯವಾಯಿತು. ಆ ನಂತರ ಬಂದ ಯಾವೊಬ್ಬ ಬ್ಯಾಟರ್ ಆತ್ಮವಿಶ್ವಾಸದಿಂದ ಬ್ಯಾಟ್ ಮಾಡಲಿಲ್ಲ. ಬ್ಯಾಟಿಂಗ್ಗೆ ನೆರವು ನೀಡುವ ಪಿಚ್ನಲ್ಲಿ ಟೆಸ್ಟ್ ಮಾದರಿಯಲ್ಲಿ ಬ್ಯಾಟಿಂಗ್ ಮಾಡಿದರು.
ಮೊದಲ ವಿಕೆಟ್ಗೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ 3.5 ಓವರ್ಗಳಲ್ಲಿ 61 ರನ್ ಸೇರಿಸಿದರು. 4ನೇ ಓವರ್ನಲ್ಲಿ ಇಲ್ಲದ ರನ್ ಕದಿಯಲು ಹೋಗಿ ಸಾಲ್ಟ್ ರನ್ ಔಟ್ ಆದರು. ಅವರು ಕೇವಲ 17 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ 37 ರನ್ ಗಳಿಸಿದ್ದರು. ಔಟಾಗುವ ಮುನ್ನ ಮಿಚೆಲ್ ಸ್ಟಾರ್ಕ್ ಎಸೆದ 3ನೇ ಓವರ್ನಲ್ಲಿ 30 ರನ್ ಸಿಡಿಸಿದ್ದರು. ಸಾಲ್ಟ್ ಔಟ್ ಆಗುತ್ತಿದ್ದಂತೆ ಆರ್ಸಿಬಿ ಅಬ್ಬರದಾಟವೂ ಅಂತ್ಯವಾಯಿತು. ಪಡಿಕ್ಕಲ್ 8 ಎಸೆತಗಳಲ್ಲಿ 1 ರನ್ಗಳಿಸಿ ಔಟ್ ಆದರೆ ವಿರಾಟ್ ಕೊಹ್ಲಿ 7ನೇ ಓವರ್ನಲ್ಲಿ ವಿಪ್ರಜ್ ನಿಗಮ್ ಬೌಲಿಂಗ್ನಲ್ಲಿ ಸ್ಟಾರ್ಕ್ಗೆ ಕ್ಯಾಚ್ ನೀಡಿ ಔಟ್ ಆದರು.
ನಂತರ ಆರ್ಸಿಬಿ ಬ್ಯಾಟರ್ಗಳು ರನ್ಗಳಿಸಲು ಪರದಾಟ ನೀಡಿದರು. ಲಿವಿಂಗ್ಸ್ಟೋನ್ 6 ಎಸೆತಗಳಲ್ಲಿ 3, ಜೀತೇಶ್ ಶರ್ಮಾ 11 ಎಸೆತಗಳಲ್ಲಿ 3, ನಾಯಕ ರಜತ್ ಪಾಟೀದಾರ್ 23 ಎಸೆತಗಳಲ್ಲಿ 25ರನ್, ಕೃನಾಲ್ ಪಾಂಡ್ಯ 18 ಎಸೆತಗಳಲ್ಲಿ 18 ರನ್ಗಳಿಸಿ ಔಟ್ ಆದರು. ಟಿಮ್ ಡೇವಿಡ್ ಕೊನೆಯ ಎರಡು ಓವರ್ಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 20 ಎಸೆತಗಳಲ್ಲಿ ಅಜೇಯ 37 ರನ್ಗಳಿಸಿ ತಂಡದ ಮೊತ್ತವನ್ನ 163ಕ್ಕೆ ಏರಿಸಿದರು.
ಆರ್ಸಿಬಿ ಮತ್ತು ಡೆಲ್ಲಿ ಇದುವರೆಗೆ 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್ಸಿಬಿ 19 ಗೆಲುವು ದಾಖಲಿಸಿದರೆ, ಡೆಲ್ಲಿ 11 ಗೆಲುವು ಪಡೆದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಮುಗಿದಿದೆ. ಚಿನ್ನಸ್ವಾಮಿಯಲ್ಲಿ 12 ಪಂದ್ಯಗಳಲ್ಲಿ ಆರ್ಸಿಬಿ 8 ಬಾರಿ ಗೆದ್ದಿದ್ದು, ಡೆಲ್ಲಿ 4 ಗೆಲುವು ಸಾಧಿಸಿದೆ.