ವಾಷಿಂಗ್ಟನ್: ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬುವ ಟ್ರಂಪ್ ಅವರ ‘ಪ್ರೊಟೆಕ್ಟಿಂಗ್ ದಿ ಅಮೆರಿಕನ್ ಪೀಪಲ್ ಅಗೇನ್ಸ್ಟ್ ಇನ್ವೇಷನ್’ ಅಡಿಯಲ್ಲಿ ಭಾರತೀಯರು ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು 24*7 H-1B ವೀಸಾ ಅಥವಾ ಗ್ರೀನ್ ಕಾರ್ಡ್ ದಾಖಲೆಗಳನ್ನು ತಮ್ಮ ಬಳಿ ಹೊಂದಿರಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಇದಕ್ಕೆ ಅಮೆರಿಕ ಕೋರ್ಟ್ ಸಹ ಸರ್ಕಾರಕ್ಕೆ ಅನುಮತಿ ನೀಡಿದೆ.
ಈ ನಿಯಮದಂತೆ ನೋಂದಾಯಿತ ವಲಸಿಗರು 10 ದಿನಗಳ ಒಳಗೆ ಮತ್ತೊಮ್ಮೆ ಸರ್ಕಾರಕ್ಕೆ ದಾಖಲೆಗಳನ್ನು ನೀಡಿ ಮರುನೋಂದಣಿ ಮಾಡಿಕೊಳ್ಳಬೇಕು. ಜೊತೆಗೆ ಈ ವಲಸಿಗರ ಮಕ್ಕಳಿಗೆ 14 ವರ್ಷ ತುಂಬಿದ ಬಳಿಕ 30 ದಿನಗಳ ಒಳಗಾಗಿ ಸರ್ಕಾರಕ್ಕೆ ಮತ್ತೊಮ್ಮೆ ಬೆರಳಚ್ಚು ದಾಖಲೆ ನೀಡಿ ಮರುನೋಂದಣಿ ಮಾಡಿಕೊಳ್ಳಬೇಕು. ಒಂದು ವೇಳೆ ನಿಯಮ ಮೀರಿದ್ರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಯಾರಿಗೆ ನಿಯಮ ಕಡ್ಡಾಯ?
ಟ್ರಂಪ್ ಅವರು ಅಕ್ರಮ ವಲಸೆ ತಡೆಗಟ್ಟುವ ನಿಟ್ಟಿನಲ್ಲಿ ಈ ನಿಯಮವನ್ನು ಅನಷ್ಠಾನಗೊಳಿಸಿದ್ದಾರೆ. ಅದರಂತೆ ಯುಎಸ್ನಲ್ಲಿ ವಾಸಿಸುತ್ತಿರುವ ವಿದೇಶಿ ನಾಗರಿಕರು, 14 ವರ್ಷಕ್ಕಿಂತ ಮೇಲ್ಪಟ್ಟವರು, ಅಮೆರಿಕದಲ್ಲಿ 30 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ವಾಸಿಸುತ್ತಿರುವವರು, ಫಾರಂ G-325R ಅನ್ನು ಭರ್ತಿ ಮಾಡುವ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೇ ಏಪ್ರಿಲ್ 11ರ ನಂತರ ಅಮೆರಿಕಕ್ಕೆ ಬರುವವರು ಬಂದ 30 ದಿನಗಳ ಒಳಗೆ ನೋಂದಾಯಿಸಿಕೊಳ್ಳಬೇಕು. ತಪ್ಪಿದ್ರೆ ಜೈಲು, ದಂಡ ಅಥವಾ ಎರಡರ ಶಿಕ್ಷೆಗೂ ಒಳಗಾಗಬಹುದು ಎಂದು ಹೇಳಲಾಗಿದೆ.
H-1B ವೀಸಾ ಹೊಂದಿರುವವರಿಗೆ ವಿನಾಯ್ತಿ
ಇನ್ನೂ H-1B ವೀಸಾ ಅಥವಾ ಗ್ರೀನ್ ಕಾರ್ಡ್ ಹೊಂದಿರುವವರು ಫಾರಂ G-325R ಅನ್ನು ಭರ್ತಿ ಮಾಡುವ ಅಗತ್ಯವಿಲ್ಲ. ಆದ್ರೆ ವಾರದ 24 ಗಂಟೆಯೂ ದಾಖಲೆಗಳನ್ನು ತಮ್ಮ ಬಳಿ ಹೊಂದಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.