ಬೆಂಗಳೂರು: ಸರ್ಕಾರಕ್ಕೆ ಬುದ್ದಿ ಏನಾದರೂ ಇದ್ದರೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ ಎಂದು ವಿಪಕ್ಷ ನಾಯಕ ಆರ್.ಆಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವೇನೂ ಜಾತಿ ಜನಗಣತಿ ವಿರೋಧಿಗಳಲ್ಲ. ಆದರೆ ಯಾರನ್ನೋ ಓಲೈಕೆ ಮಾಡಲು, ವೋಟಿಗಾಗಿ ಸಿದ್ದರಾಮಯ್ಯ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಅಂದರೆ ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು.
ಕಾಂಗ್ರೆಸ್ನಲ್ಲಿ ಬ್ರಿಟಿಷ್ DNA ಬಂದಿದೆ ಅದಕ್ಕೆ ಒಡಕು ಮಾಡುವ ಬುದ್ಧಿ ಕಲಿತಿದ್ದಾರೆ. ಈ ಜಾತಿಗಣತಿ ಒಕ್ಕಲಿಗರು, ಲಿಂಗಾಯತರಲ್ಲಿ ಬೆಂಕಿ ಹಚ್ಚುವ ವರದಿ. ಇದು ಯಾರೂ ಒಪ್ಪುವ ವರದಿ ಅಲ್ಲ. ಈಗಲೂ ಸರ್ಕಾರಕ್ಕೆ ಬುದ್ದಿ ಏನಾದರೂ ಇದ್ದರೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ. ಪ್ರತೀ ಮನೆಗೆ ಹೋಗಿ ವರದಿ ಕೊಡಲಿ ಎಂದು ಸವಾಲು ಹಾಕಿದರು.
ಜಾತಿ ಜನಗಣತಿ ವರದಿಗೆ 150 ಕೋಟಿ ರೂ. ಖರ್ಚು ಮಾಡಿದೀವಿ ಅಂತಿದ್ದಾರೆ, ಇದೇ ಬೋಗಸ್. ಶಾಮನೂರು ಅವರೇ ನಮ್ಮನೆಗೆ ಬಂದು ಸಮೀಕ್ಷೆ ಮಾಡಿಲ್ಲ ಎಂದಿದ್ದಾರೆ. ಹಾಗಾದರೆ 150 ಕೋಟಿ ರೂ. ಹೊಡೆದವರು ಯಾರು? 150 ಕೋಟಿ ರೂ. ಲೂಟಿ ಆಗಿದೆ, ಇದು ಯಾರ ಜೇಬಿಗೆ ಹೋಯ್ತು? ಆ ಕಾಂತರಾಜು ಸೈನ್ ಹಾಕದೇ ತಪ್ಪಿಸಿಕೊಂಡು ಓಡಿ ಹೋಗಿದ್ದೇಕೆ? ಇದು ಗೊಂದಲದ ಗೂಡಾಗಿದೆ, ಯಾರಿಗೂ ನಂಬಿಕೆ ಇಲ್ಲ.
ಮುಸ್ಲಿಮರನ್ನು ಓಲೈಕೆ ಮಾಡಲು, ಅವರನ್ನು ಶಾಶ್ವತವಾಗಿ ವೋಟ್ ಬ್ಯಾಂಕ್ ಮಾಡಿಕೊಳ್ಳುವ ವರದಿ ಇದು. ಸಿದ್ದರಾಮಯ್ಯ ಕೈಚಳಕದಿಂದ ಮಾಡಿರುವ ವರದಿ ಇದು. ಈಗಿನ ವರದಿಗೆ ಸಿದ್ದರಾಮಯ್ಯ ಅವರೇ ಎಲ್ಲ, ಸಿದ್ದರಾಮಯ್ಯ ಅವರೇ ಡೈರೆಕ್ಟರ್, ಸ್ಕ್ರೀನ್ ಪ್ಲೇಯರ್, ಪ್ರೊಡ್ಯೂಸರ್. ಮುಸ್ಲಿಮರನ್ನು ಟಾಪ್ನಲ್ಲಿ ಇಡಲು ಸಿದ್ದರಾಮಯ್ಯ ಹೊರಟಿದ್ದಾರೆ, ಅವರಿಗೆ ನಾಚಿಕೆ ಆಗಬೇಕು. ಇದು ಪಕ್ಕಾ ರಾಜಕೀಯದ ಸಮೀಕ್ಷೆ ಎಂದರು.