ಉಕ್ರೇನಿಯನ್ ನಗರ ಸುಮಿ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 31 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 84 ಜನರು ಗಾಯಗೊಂಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ “ಜಗತ್ತು ದೃಢವಾಗಿ ಪ್ರತಿಕ್ರಿಯಿಸುವಂತೆ” ತುರ್ತು ಮನವಿ ಮಾಡಿದರು.
“ರಷ್ಯಾ ನಗರ ಕೇಂದ್ರವನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಹೊಡೆದಿದೆ. ಬೀದಿಯಲ್ಲಿ ಅನೇಕ ಜನರಿದ್ದಾಗಲೇ,” ಉಕ್ರೇನಿಯನ್ ತುರ್ತು ಪರಿಸ್ಥಿತಿ ಹೇಳಿದೆ. “13:40 (1040GMT) ರಂತೆ, 2 ಮಕ್ಕಳು ಸೇರಿದಂತೆ 31 ಜನರು ಸಾವನ್ನಪ್ಪಿದ್ದಾರೆ” ಎಂದು ಅದು ಹೇಳಿದೆ, “10 ಮಕ್ಕಳು ಸೇರಿದಂತೆ 84 ಜನರು ಗಾಯಗೊಂಡಿದ್ದಾರೆ” ಎಂದು ಸೇರಿಸಿದೆ.
ಇಂದು ಜನರು ಚರ್ಚ್ಗೆ ಹೋಗುವ ದಿನ. ಪಾಮ್ ಸಂಡೆ, ಜೆರುಸಲೇಂಗೆ ಭಗವಂತ ಆಗಮಿಸಿದ ದಿನ. ಚರ್ಚ್ನ ಪ್ರಮುಖ ಹಬ್ಬದ ದಿನದಂದೇ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ರಷ್ಯಾ ವಿರುದ್ಧ ಗುಡುಗಿದ್ದಾರೆ.
ಉಕ್ರೇನ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿಯಾಗಿರುವ ವಿಟ್ಕಾಫ್ ಭೇಟಿ ನೀಡಿದ್ದರು. ಸೇಂಟ್ ಪೀಟರ್ಸ್ಬರ್ಗ್ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉಕ್ರೇನ್ ಶಾಂತಿ ಒಪ್ಪಂದದ ಕುರಿತು ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದರು.
ರಷ್ಯಾದ ಇಂಧನ ಮೂಲಸೌಕರ್ಯದ ಮೇಲೆ ಉಕ್ರೇನ್ ಐದು ಬಾರಿ ದಾಳಿ ನಡೆಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಶನಿವಾರ ಆರೋಪಿಸಿತ್ತು. ಶಾಂತಿ ಒಪ್ಪಂದಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದ ಬಳಿಕವೂ ದಾಳಿ ನಡೆಸುತ್ತಿರುವುದು ನಿಯಮದ ಉಲ್ಲಂಘನೆಯಾಗಿದೆ ಎಂದು ರಷ್ಯಾ ಖಂಡಿಸಿತ್ತು.