ಬೆಂಗಳೂರು:- ಕಾಂಗ್ರೆಸ್ಸನ್ನು ಜನತೆ ಧಿಕ್ಕರಿಸಿದ್ದರಿಂದ ಅವರಿಗೆ ಈಗ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನೆನಪಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ರನ್ನು ಕಾಂಗ್ರೆಸ್ನವರು ಹೇಗೆ ನಡೆಸಿಕೊಂಡರು ಎಂಬ ಸತ್ಯ, ರಾಜ್ಯ ಮತ್ತು ದೇಶದ ಜನತೆಗೆ ಗೊತ್ತಾಗಬೇಕಿದೆ ಎಂದು ಹೇಳಿದರು.
ಭಾರತದ ನಿಜವಾದ ರತ್ನವಾಗಿದ್ದ ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಲು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಬಿಜೆಪಿ ಬೆಂಬಲಿಸಿದ ವಿ.ಪಿ.ಸಿಂಗ್ ಅವರ ಸರ್ಕಾರವೇ ಬರಬೇಕಾಯಿತಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ನವರು ಸ್ವಾತಂತ್ರ್ಯದ ನಂತರದಲ್ಲಿ 50-55 ವರ್ಷಗಳ ಕಾಲ ಸುದೀರ್ಘವಾಗಿ ಆಡಳಿತ ನಡೆಸಿದ್ದಾರೆ. 40-45 ವರ್ಷಗಳ ಕಾಲ ಸುದೀರ್ಘವಾಗಿ ಗಾಂಧಿ ಕುಟುಂಬವೇ ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಸಹ ಮಹಾನ್ ನಾಯಕ ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಲು ಕಾಂಗ್ರೆಸ್ನವರಿಗೆ ಆಗಲಿಲ್ಲ. ಗಾಂಧಿ ಕುಟುಂಬಕ್ಕೆ 3 ಭಾರತರತ್ನ ಸಿಗುತ್ತದೆ. ಆದರೆ ಸಂವಿಧಾನಶಿಲ್ಪಿ ಅಂಬೇಡ್ಕರ್ರಿಗೆ ಭಾರತರತ್ನ ಕೊಡಬೇಕೆಂಬ ವಿಚಾರವು ಕಾಂಗ್ರೆಸ್ನವರ ತಲೆಯಲ್ಲಿ ಯಾವತ್ತೂ ಬರಲಿಲ್ಲ ಎಂದು ಎಂದು ಕಿಡಿಕಾರಿದರು.