2025ರ ಐಪಿಎಲ್ 30ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಗೂ ತನ್ನ ಸೋಲಿನ ಸರಣಿಯನ್ನು ಮುರಿದಿದೆ. ಸತತ ಐದು ಪಂದ್ಯಗಳಲ್ಲಿ ಸೋತ ನಂತರ, ಚೆನ್ನೈ ತಂಡವು ಈ ಸೀಸನ್ನಲ್ಲಿ ಎರಡನೇ ಗೆಲುವು ದಾಖಲಿಸಿತು. ಲಕ್ನೋ ನೀಡಿದ 167 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ ಕೊನೆಯ ಓವರ್ನಲ್ಲಿ ಗುರಿ ಸಾಧಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನಲ್ಲಿ ಎಂಎಸ್ ಧೋನಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಚೆನ್ನೈ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. 2025ರಲ್ಲಿ ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಪಂತ್ ಅವರ ಅಮೋಘ ಆಟದ ನೆರವಿನಿಂದ ಎಲ್ಎಸ್ಜಿ ಸಾಧಾರಣ ಮೊತ್ತ ಕಲೆ ಹಾಕಿತು. 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ, 19.3 ಓವರ್ಗಳಲ್ಲೇ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ ಗೆದ್ದು ಬೀಗಿತು. ದುಬೆ ಮತ್ತು ಎಂಎಸ್ ಧೋನಿ ಅಜೇಯ 58 ರನ್ಗಳ ಜತೆಯಾಟ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಇದು 2025ರಲ್ಲಿ ಧೋನಿ ನಾಯಕತ್ವದಲ್ಲಿ ಸಿಕ್ಕ ಮೊದಲ ಗೆಲುವು ಇದಾಗಿದೆ.
ಬೌಲಿಂಗ್ ಟ್ರ್ಯಾಕ್ನಲ್ಲಿ 168 ರನ್ಗಳ ಸವಾಲಿನ ಮೊತ್ತವನ್ನೇ ಬೆನ್ನಟ್ಟಿದ ಸಿಎಸ್ಕೆ, ಉತ್ತಮ ಆರಂಭ ಪಡೆಯಿತು. ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಆಡುವ ಅವಕಾಶ ಪಡೆದ ಶೇಕ್ ರಶೀದ್ ಬಿರುಸಿನ ಆರಂಭ ಒದಗಿಸಿದರು. ಆದರೆ, ಅವರ ಆವೇಶಕ್ಕೆ (19 ಎಸೆತ, 6 ಬೌಂಡರಿ, 27 ರನ್) ಆವೇಶ್ ಖಾನ್ ಕಡಿವಾಣ ಹಾಕಿದರು. ಬಳಿಕ ಮತ್ತೊಬ್ಬ ಆರಂಭಿಕ ರಚಿನ್ ರವೀಂದ್ರ 37 ರನ್ ಸಿಡಿಸಿದ್ದಾಗ ಏಡನ್ ಮಾರ್ಕ್ರಮ್ ಬೌಲಿಂಗ್ನಲ್ಲಿ ಎಲ್ಬಿ ಆದರು. ಹೀಗಿದ್ದರೂ ಸ್ಕೋರ್ ಉತ್ತಮವಾಗಿತ್ತು. ಆದರೆ ಮಧ್ಯಮ ಕ್ರಮಾಂಕ ಮತ್ತೆ ಕೈಕೊಟ್ಟಿತು. ರಚಿನ್ ಬೆನ್ನಲ್ಲೇ ರಾಹುಲ್ ತ್ರಿಪಾಠಿ (9), ರವೀಂದ್ರ ಜಡೇಜಾ (7), ವಿಜಯ್ ಶಂಕರ್ (9) ಹಿಂದಿದೆಯೇ ಪೆವಿಲಿಯನ್ ಸೇರಿದರು.
ಕೊನೆಯ 5 ಓವರ್ಗಳಿಗೆ 56 ರನ್ ಬೇಕಿದ್ದ ಅವಧಿಯಲ್ಲಿ ಕಣಕ್ಕಿಳಿದ ಧೋನಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅದಾಗಲೇ ಕ್ರೀಸ್ನಲ್ಲಿದ್ದ ಶಿವಂ ದುಬೆ ದೊಡ್ಡ ಹೊಡೆತಗಳಿಗೆ ಕೈ ಹಾಕುವ ಮೂಲಕ ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಶಿವ ದುಬೆ 37 ಎಸೆತಗಳಿಗೆ 3 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 43 ರನ್ ಸಿಡಿಸಿದರೆ, ಮತ್ತೊಂದೆಡೆ ಧೋನಿ 11 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 26 ರನ್ ಗಳಿಸಿ ನಾಟೌಟ್ ಆದರು. ವಿಕೆಟ್ ಕೀಪಿಂಗ್ನಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದ ಎಂಎಸ್ ಧೋನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರೆಯಿತು