ಬೆಂಗಳೂರು: ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಾಲ್ವರ ವಿರುದ್ಧ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಬಂಧಿತ ಓರ್ವ ಹಾಗೂ ತಲೆಮರೆಸಿಕೊಂಡಿರುವ ಮೂವರು ನಿಷೇಧಿತ ಪಿಎಫ್ಐ ಸಂಘಟನೆ ಆರೋಪಿಗಳು ಸೇರಿ ಒಟ್ಟು ನಾಲ್ವರ ವಿರುದ್ಧ 2ನೇ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಅಬ್ದುಲ್ ನಾಸೀರ್, ನೌಷದ್, ಅಬ್ದುಲ್ ರೆಹಮಾನ್ ಹಾಗೂ ಕಳೆದ ಜನವರಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಅತೀಕ್ ಅಹಮದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಐಪಿಸಿ) ಹಾಗೂ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆಯಡಿ (ಯುಎಪಿಎ) ವಿವಿಧ ಸೆಕ್ಷನ್ ಗಳನ್ನ ದಾಖಲಿಸಲಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಈ ಪೈಕಿ 21 ಮಂದಿ ಬಂಧಿಸಿದರೆ ಒಟ್ಟು ಆರು ಮಂದಿ ಆರೋಪಿಗಳು ತಲೆಮರೆಸಿಕೊಂಡರೆ ಮತ್ತೋರ್ವ ಮೃತಪಟ್ಟಿದ್ದಾನೆ ಎಂದು ಎನ್ಐಎ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಳಿ ಕೂದಲು ಬುಡದಿಂದಲೇ ಕಡು ಕಪ್ಪಾಗ್ಬೇಕಾ!? ಈ ಹಣ್ಣಿನ ಗಿಡದ ಎಲೆಯನ್ನು ನೀರಲ್ಲಿ ಕುದಿಸಿ ತಲೆಗೆ ಹಚ್ಚಿ ಸಾಕು!
ನಾಪತ್ತೆಯಾಗಿರುವ ಅಬ್ದುಲ್ ನಾಸೀರ್, ನೌಷದ್ ಹಾಗೂ ರೆಹಮಾನ್ ಅವರು ಮೈಸೂರು, ಚಾಮರಾಜನಗರ ಹಾಗೂ ತಮಿಳುನಾಡಿನ ಈರೋಡ್ ಜಿಲ್ಲೆಗಳಲ್ಲಿ ಮುಖ್ಯ ಆರೋಪಿಗಳಿಗೆ ಆಶ್ರಯ ನೀಡಿದ್ದರು. ಅಲ್ಲದೆ, ತುಫೈಲ್ ಎಂಬ ಆರೋಪಿಗೆ ಬೆಂಗಳೂರಿನಲ್ಲಿ ಆಶ್ರಯ ಕೊಟ್ಟಿದ್ದರು ಎಂದು ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ತಿಳಿಸಿದ್ಧಾರೆ.
2022 ಜುಲೈ26ರಂದು ದಕ್ಷಿಣ ಕನ್ನಡ ಸುಳ್ಳ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರನನ್ನ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಆಗಸ್ಟ್ 4ರಂದು ಎನ್ಐಎ ತನಿಖೆ ಆರಂಭಿಸಿತ್ತು. ಹತ್ಯೆ ಬಳಿಕ ಪರಾರಿಯಾಗಲು ಪ್ರಮುಖ ಆರೋಪಿ ಮುಸ್ತಾಫ ಪೈಚಾರ್ ಗೆ ಬಂಧಿತರಾದ ಅತೀಕ್ ಹಾಗೂ ಸದ್ಯ ಮೃತನಾಗಿರುವ ಕಲಾಂದರ್ ಚೆನ್ನೈ ನಲ್ಲಿ 2022ರಿಂದ 23ರವರೆಗೂ ಆಶ್ರಯ ಒದಗಿಸಿದ್ದರು. ಅಲ್ಲದೆ, ನಾಪತ್ತೆಯಾಗಿರುವ ಅಬ್ದುಲ್ ರೆಹಮಾನ್ ವಿದೇಶಕ್ಕೆ ಪರಾರಿಯಾಗಲು ಹಾಗೂ ರಿಯಾಜ್ ಎಂಬಾತ ಪೈಚಾರ್ ಗೆ ಆಶ್ರಯ ಒದಗಿಸುವ ಬಗ್ಗೆ ಅತೀಕ್ ಹಾಗೂ ಕಲಾಂದರ್ ಗೆ ಮಾರ್ಗದರ್ಶನ ನೀಡಿದ್ದ ಎಂದು ಚಾರ್ಜ್ ಶೀಟ್ ನಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.