ರಾಯಚೂರು:- ಜಿಲ್ಲೆಯ ದೇವದುರ್ಗ ತಾ. ಅಮರಾಪುರ ಗ್ರಾಮದ ಬಳಿ ಕುರಿಗಳ ಖರೀದಿಗೆ ಹೊರಟಿದ್ದ ನಾಲ್ವರು ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿರುವ ಘಟನೆ ಜರುಗಿದೆ.
ಮೃತರನ್ನು ನಾಗರಾಜ್, ಸೋಮ, ನಾಗಭೂಷಣ, ಮುರಳಿ ಎಂದು ಗುರುತಿಸಲಾಗಿದೆ. ಕುರಿಗಳ ಖರೀದಿಗೆ ಹೊರಟಿದ್ದವರ ಬೊಲೆರೋ ಪಿಕಪ್ ವಾಹನವು ರಾಷ್ಟ್ರೀಯ ಹೆದ್ದಾರಿ ಬಳಿಯ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟ ನಾಲ್ವರು ತೆಲಂಗಾಣದ ಹಿಂದೂಪುರ ಮೂಲದವರು. ಹಿಂದೂಪುರದಿಂದ ಶಹಾಪೂರ ಸಂತೆಗೆ ಹೊರಟಿದ್ದ ವೇಳೆ ದುರ್ಘಟನೆ ನಡೆದಿದೆ. ಮಾಹಿತಿ ತಿಳಿದ ಕೂಡಲೇ ಗಬ್ಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.