ಇಂದು ಲವ್ಲಿ ಸ್ಟಾರ್ ಪ್ರೇಮ್ ಜನ್ಮದಿನ. ಅವರ ಹುಟ್ಟುಬ್ಬದ ಸ್ಪೆಷಲ್ ಆಗಿ ಹೊಸ ಚಿತ್ರ ಘೋಷಣೆಯಾಗಿದೆ. ಪ್ರತಿ ಸಿನಿಮಾಗಳಲ್ಲಿಯೂ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಅವರು ಬಂದಿದ್ದಾರೆ. ಬರೋ ಎಲ್ಲಾ ಪಾತ್ರಗಳನ್ನೂ ಪ್ರೇಮ್ ಒಪ್ಪಿಕೊಳ್ಳುವುದಿಲ್ಲ. ಅಳೆದು ತೂಗಿ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾಗಳನ್ನೇ ಮಾಡುತ್ತಾ ಬಂದಿದ್ದಾರೆ. ಈಗ ಪ್ರೇಮ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ ಸ್ಪಾರ್ಕ್ ಚಿತ್ರಕ್ಕೆ ಪ್ರೇಮ್ ಎಂಟ್ರಿ ಕೊಟ್ಟಿದ್ದಾರೆ.
ಸ್ಪಾರ್ಕ್ ಚಿತ್ರದಲ್ಲಿ ನಿರಂಜನ್ ಹೀರೋ. ಹಾಗಿದ್ದರೇ ಪ್ರೇಮ್ ಪಾತ್ರವೇನು? ಗೆಸ್ಟ್ ರೋಲ್ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರಾ? ಅಲ್ಲ. ಬದಲಾಗಿ ಒಂದು ವಿಶಿಷ್ಟ ಪಾತ್ರದಲ್ಲಿ ನೆನಪಿರಲಿ ಪ್ರೇಮ್ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಲವ್ಲಿ ಸ್ಟಾರ್ ಗೊಂದು ಸ್ಪೆಷಲ್ ಪಾತ್ರ ಡಿಸೈನ್ ಮಾಡಿದ್ದಾರೆ. ಹಿಂದೆಂದೂ ಕಾಣದ ಲುಕ್ ನಲ್ಲಿ ಪ್ರೇಮ್ ನಿಮಗೆ ಕಾಣಿಸ್ತಾರೆ. ಸ್ಪೆಷಲ್ ಪಾತ್ರವನ್ನು ಅವರಿಗಾಗಿ ಮಹಾಂತೇಶ್ ಎಣೆದಿದ್ದು, ಹೀಗಾಗಿ ಪ್ರೇಮ್ ಕೂಡ ಇಷ್ಟಪಟ್ಟು ಚಿತ್ರ ಮಾಡಲು ಮುಂದಾಗಿದ್ದಾರೆ. ತಮ್ಮ ಇಷ್ಟುವರ್ಷದ ಪಯಣದ ಅನುಭವಗಳನ್ನು ಇಟ್ಟುಕೊಂಡು ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಎಲ್ಲರ ಪಾತ್ರಗಳನ್ನು ವಿಶೇಷವಾಗಿ ರೂಪಿಸಿದ್ದಾರೆ.
ಜೇಮ್ಸ್, ಭರಾಟೆ, ಕನಕ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ದುಡಿದಿರುವ ಡಿ.ಮಹಾಂತೇಶ್ ಹಂದ್ರಾಳ್ ಸ್ಪಾರ್ಕ್ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರದಲ್ಲಿ ನಿರಂಜನ್ ಸುಧೀಂದ್ರ ಪತ್ರಕರ್ತನಾಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ರಚನಾ ಇಂದರ್ ಅಭಿನಯಿಸುತ್ತಿದ್ದಾರೆ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸ್ಪಾರ್ಕ್ ಚಿತ್ರ ಡಾ.ಗರಿಮಾ ಅವಿನಾಶ್ ವಸಿಷ್ಠ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಮಧು ಸಂಕಲನ ಈ ಚಿತ್ರಕ್ಕಿದೆ. ಸದ್ಯ ಸ್ಪಾರ್ಕ್ ಶೂಟಿಂಗ್ ಭರದಿಂದ ಸಾಗುತ್ತಿದೆ.