ಬೆಂಗಳೂರು: ಪೊಲೀಸ್ ಹೆಸರಲ್ಲಿ ದರ್ಪ ತೋರಿದ್ದವನನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ. ನಿತುಲ್ ರಾಜ್ ಬಂಧಿತ ಆರೋಪಿಯಾಗಿದ್ದು, ಕಳೆದ ವಾರ ಸಂತೋಷ್ ಕಾರಿನಲ್ಲಿ ಹೋಗುವಾಗ ಆರೋಪಿಯ ಕಾರಿಗೆ ಟಚ್ ಆಗಿದೆ.
ವಾಹನ ನಿಲ್ಲಿಸದೆ ಮುಂದೆ ಹೋಗಿದ್ದರಿಂದ ಆಕ್ರೋಶಗೊಂಡ ನಿತುಲ್, ಸೈರನ್ ಮೊಳಗಿಸಿ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ಸಂತೋಷ್ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದರು. ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ಪರಿಶೀಲಿಸಿದಾಗ ಆರೋಪಿಯ ಕಾರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.