ಉಡುಪಿ: ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ. ಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಮತ್ತು ಬೀದರ್ನಲ್ಲಿ ಜನಿವಾರ ಧರಿಸಿದ್ದಕ್ಕೆ ಪರೀಕ್ಷೆ ನಿರಾಕರಣೆ ಮಾಡಿದ ವಿಚಾರವಾಗಿ ಉಡುಪಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.
ಆಳುವ ಸರ್ಕಾರಕ್ಕೆ ಏನಾಗಿದೆಯೋ ಅರ್ಥವಾಗುತ್ತಿಲ್ಲ. ಸಿಇಟಿ ಪರೀಕ್ಷೆಯಲ್ಲಿ ಕಿವಿಯೋಲೆ ತೆಗೆಸಿದಾಗ ವಿವಾದ ಆಗಿತ್ತು. ಮಾಂಗಲ್ಯ ತೆಗೆಯಬೇಕು ಎಂಬ ಕಾರಣಕ್ಕೂ ಗಲಾಟೆ ಆಗಿತ್ತು. ಈಗ ಜನಿವಾರ ತೆಗೆಯಲು ಪ್ರಾರಂಭ ಮಾಡಿದ್ದಾರೆ. ಸರ್ಕಾರಕ್ಕೆ, ಮಂತ್ರಿಗಳಿಗೆ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿಲ್ವಾ? ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಬ್ರಾಹ್ಮಣರು ಮಾತ್ರ ಯಜ್ಞೋಪವೀತ ಹಾಕುವುದಲ್ಲ. ಗೌಡ ಸರಸ್ವತರು, ವಿಶ್ವಕರ್ಮರು ಎಲ್ಲರೂ ಹಾಕುತ್ತಾರೆ. ಯಜ್ಞೋಪವೀತವನ್ನು ಪವಿತ್ರ ಎಂದು ಜನ ಭಾವಿಸುತ್ತಾರೆ. ಈ ರೀತಿ ಮಾಂಗಲ್ಯ ಕಿವಿಯೋಲೆ ಜನಿವಾರ ತೆಗೆಸುವುದು ಸರಿನಾ? ಜನಿವಾರದಲ್ಲಿ ನೇಣು ಹಾಕಿಕೊಳ್ಳುತ್ತೀರಾ ಅನ್ನೋದು ಸರಿಯಲ್ಲ ಎಂದು ಬೇಸರ ಹೊರಹಾಕಿದರು.