ಬೆಂಗಳೂರು:-ಇಂಡಿಗೋ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪೇಗೌಡ ಏರ್ಪೋರ್ಟ್ ಮಂಡಳಿ ಸ್ಪಷ್ಟನೆ ಕೊಟ್ಟಿದೆ.
ಇಂಜಿನ್ ರಿಪೇರಿಯಿಂದಾಗಿ ಕೆಟ್ಟು ನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಿಟಿ ವಾಹನದ ಟಾಪ್ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಟಿಟಿ ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಕೂದಲಳತೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಕಳೆದ ಹಲವು ದಿನಗಳಿಂದ ಇಂಜಿನ ರಿಪೇರಿಯಿಂದ ಏರ್ಪೋಟ್ ಒಳಭಾಗದ ಆಲ್ಪಾ ಪಾರ್ಕಿಂಗ್ ಬೇ 71 ರಲ್ಲಿ ಇಂಡಿಗೋ ವಿಮಾನ ನಿಂತಿತ್ತು. ಆದರೆ ಚಾಲಕನ ಅಜಾಗರೂಕತೆಯಿಂದ ಪ್ಲೈಟ್ ನ ಮುಂಬಾಗಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ.
ಟಿಟಿ ವಾಹನವು, ಏರ್ಪೋಟ್ ಒಳ ಭಾಗದಲ್ಲಿ ವಿಮಾನಗಳಿಗೆ ಸಿಬ್ಬಂದಿಯನ್ನ ಕರೆದುಕೊಂಡು ಹೋಗಿ ಬಿಡುತ್ತಿತ್ತು. ಅದರಂತೆ ಸಿಬ್ಬಂದಿಯನ್ನ ಬಿಟ್ಟು ಬರ್ತಿದ್ದ ವೇಳೆ ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ.
ಘಟನೆ ಬಗ್ಗೆ ಕೆಂಪೇಗೌಡ ಏರ್ಪೋರ್ಟ್ ಆಡಳಿತ ಮಂಡಳಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಏ.18ರ ಮಧ್ಯಾಹ್ನ 12.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾಂಟ್ರ್ಯಾಕ್ಟ್ ಏಜೆನ್ಸಿ ಕಡೆಯ ಚಾಲಕ ಟಿಟಿ ವಾಹನವನ್ನು ಚಲಾಯಿಸಿಕೊಂಡು ಕೆಟ್ಟು ನಿಂತಿದ್ದ ವಿಮಾನದ ಬಳಿ ಬಂದಿದ್ದು, ಫ್ಲೈಟ್ಗೆ ಟಿಟಿ ವಾಹನದ ಮೇಲ್ಭಾಗ ತಗುಲಿ ಡ್ಯಾಮೇಜ್ ಆಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ತಕ್ಷಣ ನಮ್ಮ ಸಿಬ್ಬಂದಿ ಮುನ್ನೆಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಘಟನೆ ಕುರಿತು ಈಗಾಗಲೇ ಡಿಜಿಸಿಎಗೆ ಮಾಹಿತಿ ರವಾನಿಸಿದ್ದೇವೆ. ಪ್ರಯಾಣಿಕರಿಗೆ ಹಾಗೂ ವಿಮಾನಗಳ ಹಾರಾಟಕ್ಕೆ ಅಡಚಣೆಯಾಗಿಲ್ಲ. ಪ್ರಯಾಣಿಕರು, ಸಿಬ್ಬಂದಿ, ಏರ್ಲೈನ್ಸ್ನ ಸುರಕ್ಷತೆ ನಮ್ಮ ಆದ್ಯತೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.