ಲಕ್ನೋ: ಪತ್ನಿ ಮತ್ತು ಆಕೆಯ ಮನೆಯವರ ವಿರುದ್ಧ ಕಿರುಕುಳ ಆರೋಪ ಮಾಡಿ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಇಟಾವಾದಲ್ಲಿ ಈ ಘಟನೆ ನಡೆದಿದೆ.
33 ವರ್ಷದ ಎಂಜಿನಿಯರ್ ಮೋಹಿತ್ ಯಾದವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿದ್ದು, ಅದರಲ್ಲಿ ತಮ್ಮ ಅತ್ತೆ-ಮಾವ ಬೆದರಿಕೆಯೊಡ್ಡಿದ್ದಾರೆ ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ‘ನನ್ನ ಮರಣದ ನಂತರವೂ ನನಗೆ ನ್ಯಾಯ ಸಿಗದಿದ್ದರೆ, ನನ್ನ ಅಸ್ಥಿಯನ್ನು ಚರಂಡಿಗೆ ಎಸೆಯಿರಿ’ ಎಂದು ಹೇಳಿಕೊಂಡಿದ್ದಾರೆ.
ಯಾದವ್ ಕಳೆದ ಗುರುವಾರ ಇಟಾವಾದ ಜಾಲಿ ಹೋಟೆಲ್‌ಗೆ ಚೆಕ್ ಇನ್ ಆಗಿದ್ದರು. ಅವರು ಕೊಠಡಿಯಿಂದ ಹೊರಬರದೇ ಇದ್ದಾಗ ಸಿಬ್ಬಂದಿಗೆ ಅನುಮಾನ ಬಂದು ರೂಮ್ ಪರಿಶೀಲನೆ ನಡೆಸಿದಾಗ ಯಾದವ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಔರೈಯಾ ಜಿಲ್ಲೆಯ ನಿವಾಸಿಯಾಗಿದ್ ಯಾದವ್, ಸಿಮೆಂಟ್ ಕಂಪನಿಯಲ್ಲಿ ಫೀಲ್ಡ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 2023ರಲ್ಲಿ ಪ್ರಿಯಾ ಎಂಬುವವರನ್ನು ಮದುವೆಯಾಗಿದ್ದರು. ಎರಡು ತಿಂಗಳ ಹಿಂದಷ್ಟೇ ಬಿಹಾರದಲ್ಲಿ ಪ್ರಿಯಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ವೇಳೆ ಗರ್ಭಿಣಿಯಾಗಿದ್ದ ಪ್ರಿಯಾರಿಗೆ ಆಕೆಯ ತಾಯಿ ಗರ್ಭಪಾತ ಮಾಡಿಸಲು ಒತ್ತಾಯಿಸಿದ್ದಾರೆ ಎಂದು ಯಾದವ್ ವಿಡಿಯೋದಲ್ಲಿ ಆರೋಪಿಸಿದ್ದಾರೆ.