ಈಗೀಗ ಚಳಿ, ಜ್ವರ, ಕೆಮ್ಮು, ಮೈ-ಕೈ ನೋವು ಏನೇ ಬಂದರೂ ಮಾತ್ರೆಗಳನ್ನು ತಿನ್ನುವ ಅಭ್ಯಾಸ ಶುರುವಾಗಿದೆ. ಆದರೆ, ನಿಯಮಿತವಾಗಿ ಮಾತ್ರೆಗಳನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಪ್ಯಾರಸಿಟಮಾಲ್ ಮಾತ್ರೆಯ ಹೆಚ್ಚಿನ ಪ್ರಮಾಣದ ಬಳಕೆಯಿಂದ ಆಕ್ಸಿಡೇಟಿವ್ ಒತ್ತಡ ಅಥವಾ ಜೀವಾಣುಗಳ ಸಂಗ್ರಹದ ಪರಿಣಾಮವಾಗಿ ಹೃದಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಆದಾಗ್ಯೂ, ರಾಷ್ಟ್ರೀಯ ಆರೋಗ್ಯ ಸೇವೆ (NHS) ವರದಿಯ ಪ್ರಕಾರ, ವಯಸ್ಕರು 500mg ಮಾತ್ರೆಗಳನ್ನು ದಿನಕ್ಕೆ 4 ಬಾರಿ ತೆಗೆದುಕೊಳ್ಳಬಹುದು. ಆದರೆ ಡೋಸ್ಗಳ ನಡುವೆ ಕನಿಷ್ಠ 4 ಗಂಟೆಗಳ ಕಾಲ ಅಂತರವಿರಬೇಕು. 24 ಗಂಟೆಗಳಲ್ಲಿ 8 ಕ್ಕಿಂತ ಹೆಚ್ಚು ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಂದು ತಿಳಿಸಿದೆ.
ದೀರ್ಘಕಾಲದ ನೋವಿಗೆ ಪ್ಯಾರಸಿಟಮಾಲ್ ಬಳಸುವವರು ತಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಪ್ರತ್ಯೇಕ ಔಷಧಗಳನ್ನು ಬಳಸಬೇಕು ಎಂದು ಸಂಶೋಧಕರು ಹೇಳಿದ್ದಾರೆ. ಅಧಿಕ ರಕ್ತದೊತ್ತಡ ತುಂಬಾ ಸಾಮಾನ್ಯವಾಗಿದೆ. ವಯಸ್ಕರಲ್ಲಿ ಮೂವರಲ್ಲಿ ಒಬ್ಬರು ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ ಮತ್ತು ಅದು ವಯಸ್ಸಾದಂತೆ ಹೆಚ್ಚಾಗುತ್ತದೆ. ಈಗೀಗ ಪ್ಯಾರೆಸಿಟಮಾಲ್ ತೆಗೆದುಕೊಳ್ಳುವುದು ತುಂಬಾ ಸಾಮಾನ್ಯವಾಗಿದೆ ಎಂದು ನಮಗೆ ತಿಳಿದಿದೆ. ಅಧಿಕ ರಕ್ತದೊತ್ತಡ ಹೊಂದಿರುವ ಬಹಳಷ್ಟು ರೋಗಿಗಳು ಪ್ಯಾರೆಸಿಟಮಾಲ್ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಪ್ಯಾರೆಸಿಟಮಾಲ್ ರೋಗಿಗಳ ಮೇಲೆ ದೊಡ್ಡ ಪರಿಣಾಮವನ್ನು ಬೀರಬಹುದು ಎಂದಿದ್ದಾರೆ.
ಆಗಾಗ ಪ್ಯಾರಾಸಿಟಮಲ್ ತೆಗೆದುಕೊಳ್ಳುವ ಜನರು ಚಿಂತಿಸಬೇಕಾಗಿಲ್ಲ ಎಂದು NHS ಲೋಥಿಯನ್ನಲ್ಲಿ ಕ್ಲಿನಿಕಲ್ ಫಾರ್ಮಾಕಾಲಜಿ ಮತ್ತು ನೆಫ್ರಾಲಜಿಯ ಸಲಹೆಗಾರರಾಗಿರುವ ಡಾ. ಇಯಾನ್ ಮ್ಯಾಕ್ಇಂಟೈರ್ ಹೇಳಿದ್ದಾರೆ. ತಲೆನೋವು ಅಥವಾ ಜ್ವರಕ್ಕೆ ಪ್ಯಾರಸಿಟಮಾಲ್ನ ಅಲ್ಪಾವಧಿಯ ಬಳಕೆಯಿಂದ ಸಮಸ್ಯೆಯಿಲ್ಲ. ಆದರೆ ದೀರ್ಘಕಾಲದವರೆಗೆ ನಿಯಮಿತವಾಗಿ ಪ್ಯಾರಾಸಿಟಮಲ್ ಸೇವಿಸುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂದು ತಿಳಿಸಿದ್ದಾರೆ.