ದುನಿಯಾ ಸೂರಿ ಗರಡಿಯಲ್ಲಿ ಪಳಗಿರುವ ಅಭಿ ನಿರ್ದೇಶನದ ಚೊಚ್ಚಲ ಸಿನಿಮಾ ಸೋಮು ಸೌಂಡ್ ಇಂಜಿನಿಯರ್ ಸದ್ದಿಲ್ಲದೇ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕಳೆದ ವರ್ಷ ಮಾರ್ಚ್ 15ಕ್ಕೆ ಬಿಡುಗಡೆ ಕಂಡಿದ್ದ ಚಿತ್ರವೀಗ ಅಮೇಜಾನ್ ಪ್ರೈಮ್ ಗೆ ಎಂಟ್ರಿ ಕೊಟ್ಟಿದೆ. ಆದ್ರೆ ಅಲ್ಲೊಂದು ಟ್ವಿಸ್ಟ್ ಇದೆ. ಉತ್ತರ ಕರ್ನಾಟಕ ಮಣ್ಣಿನ ಸೊಗಡಿನ ಕಥಾಹಂದರವನ್ನು ನೀವು ಮನೆ ಮಂದಿ ಕುಳಿತು ನೋಡ್ಬೇಕು ಅಂದರೆ 99 ರೂಪಾಯಿ ಪಾವತಿಸಬೇಕು. ಅಂದರೆ ಅಮೇಜಾನ್ ಪ್ರೈಮ್ ಚಂದಾದಾರರಾದರೆ ಈ ಸಿನಿಮಾವನ್ನು ವೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಈ ಸಿನಿಮಾ ನೋಡಬೇಕು ಎಂದರೆ ನೀವು ಹೆಚ್ಚುವರಿಯಾಗಿ 99 ರೂಪಾಯಿ ಹಣ ಪಾವತಿಸಿಯೇ ʼಸೋಮು ಸೌಂಡ್ ಇಂಜಿನಿಯರ್ʼ ನೋಡಬಹುದು.
ʼಸೋಮು ಸೌಂಡ್ ಇಂಜಿನಿಯರ್ʼ ಗಟ್ಟಿಕಥೆಯ ಸಿನಿಮಾ. ಅಪ್ಪ ಮಗನ ಬಾಂಧವ್ಯದ ಜೊತೆಗೆ ಈ ಚಿತ್ರ ಬದುಕಿನ ಪಾಠವನ್ನು ಹೇಳುತ್ತದೆ. ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ, ಭಾಷೆ, ಉತ್ತರ ಕರ್ನಾಟಕದ ಜವಾರಿ ಸಂಗೀತ, ಸ್ಥಳೀಯ ಹಾಡುಗಳು ಜತೆಗೆ ಸ್ಥಳೀಯರನ್ನೇ ಬಳಸಿಕೊಂಡು ಸಿನಿಮಾ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಗಂಜಿನಾಳ ಗ್ರಾಮದಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಸಲಾಗಿತ್ತು.
ಸೋಮು ಟೆಕ್ನಿಷಿಯನ್ ಚಿತ್ರ
ಸೋಮು ಸೌಂಡ್ ಇಂಜಿನಿಯರ್ ಸಿನಿಮಾಗೆ ದಿ ಬೆಸ್ಟ್ ತಂತ್ರಜ್ಞರೇ ಕೆಲಸ ಮಾಡಿರುವುದು ಮೊತ್ತೊಂದು ವಿಶೇಷ. ಚಿತ್ರಕ್ಕೆ ಚರಣ್ ರಾಜ್ ಉತ್ತರ ಕರ್ನಾಟಕದ ನೆಟಿವಿಟಿಗೆ ತಕ್ಕಂತೆ ಸಂಗೀತ ಕೊಟ್ಟಿದ್ದಾರೆ. ಶಿವು ಸೇನಾ ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಅದ್ಭುತ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ನಿರ್ದೇಶಕ ಅಭಿ ಜೊತೆಗೂಡಿ ಮಾಸ್ತಿ ಈ ಚಿತ್ರಕ್ಕೆ ತೂಕದ ಮಾತು ಒದಗಿಸಿದ್ದರು.
‘ಸಲಗ’ ಸಿನಿಮಾದಲ್ಲಿ ‘ಕೆಂಡ’ ಪಾತ್ರ ಮಾಡಿದ್ದ ಶ್ರೇಷ್ಠ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಶ್ರೇಷ್ಠಗೆ ಜೋಡಿಯಾಗಿ ನಿವಿಷ್ಕಾ ಪಾಟೀಲ್ ಕಾಣಿಸಿಕೊಂಡಿದ್ದಾರೆ. ಇವರ ಜತೆಗೆ ಜಹಾಂಗೀರ್ ಅಮೋಘವಾಗಿ ಅಭಿನಯಿಸಿದ್ದಾರೆ.
ಡಾಲಿ-ಸೂರಿ ಸಾಥ್
ದುನಿಯಾ ಸೂರಿ ಶಿಷ್ಯ ಅಭಿ ಚಿತ್ರ ‘ಸೋಮು ಸೌಂಡ್ ಇಂಜಿನಿಯರ್’ಗೆ ಟೈಟಲ್ ಡಿಸೈನ್ ಮಾಡಿಕೊಟ್ಟಿದ್ದರು. ಅಲ್ಲದೇ ಸಿನಿಮಾ ಟ್ರೇಲರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದರು. ಡಾಲಿ ಧನಂಜಯ್ ಕೂಡ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಿಲೀಸ್ ಗೂ ಮೊದ್ಲೇ ಪ್ರೀಮಿಯರ್ ಶೋನಲ್ಲಿ ‘ಸೋಮು ಸೌಂಡ್ ಇಂಜಿನಿಯರ್ʼ ಸೂರಿ ಭಾವುಕರಾಗಿ ಶಿಷ್ಯನಿಗೆ ಪತ್ರದ ಮೂಲಕ ಶುಭ ಹಾರೈಸಿದ್ದರು.
ಸೂರಿ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ದುಡಿದ್ದ ಅಭಿ ಸೋಮು ಸೌಂಡ್ ಇಂಜಿನಿಯರ್ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದರು. ಅವರ ವಿಷನ್ ಗೆ ಕ್ರಿಸ್ಟೋಫರ್ ಕಿಣಿ ಹಣ ಹೂಡಿದ್ದರು. ಮನಮುಟ್ಟುವ ಕಂಟೆಂಟ್ ಹೊಂದಿರುವ ಸೋಮು ಸೌಂಡ್ ಇಂಜಿನಿಯರ್ ಸಿನಿಮಾವೀಗ ಅಮೇಜಾನ್ ಪ್ರೈಮ್ ನಲ್ಲಿಯೂ ಸದ್ದು ಮಾಡಲಿದೆ.
ಹೊಸ ಪ್ರಯತ್ನದಲ್ಲಿ ಅಭಿ!
ಸೋಮು ಸೌಂಡ್ ಇಂಜಿನಿರ್ ಸಿನಿಮಾ ಮೂಲಕ ಮೊದಲ ಪ್ರಯತ್ನದಲ್ಲಿಯೇ ಭರವಸೆ ಹುಟ್ಟಿಸಿರುವ ನಿರ್ದೇಶಕ ಅಭಿ ಸದ್ಯ ಹೊಸ ಪ್ರಯತ್ನದಲ್ಲಿದ್ದಾರೆ. ಮತ್ತೊಂದು ಗಟ್ಟಿ ಕಂಟೆಂಟ್ ನೊಂದಿಗೆ ಪ್ರೇಕ್ಷಕರ ಎದುರು ಬರಲು ಸಿದ್ಧವಾಗುತ್ತಿದೆ. ಕಥೆ ಸಿದ್ದಪಡಿಸಿಕೊಂಡು ನಾಯಕನ ಹುಡುಕಾಟದಲ್ಲಿದ್ದಾರೆ. ಈ ಬಾರಿ ಸ್ಟಾರ್ ಹೀರೋಗೆ ಅಭಿ ಆಕ್ಷನ್ ಕಟ್ ಹೇಳಲಿದ್ದಾರೆ ಅನ್ನೋದೇ ಸ್ಪೆಷಲ್.