ಹುಬ್ಬಳ್ಳಿ : ಹುಬ್ಬಳ್ಳಿಯ ಪೊಲೀಸ್ ಅಧಿಕಾರಿಯೊಬ್ಬರು ಶ್ರೀಲಂಕಾದಿಂದ ಭಾರತದ ಧನುಷ್ ಕೋಡಿಯವರೆಗೆ ಸುಮಾರು 28 ಕಿಲೋ ಮೀಟರ್ ಸಮುದ್ರದಲ್ಲಿ ಈಜಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸೆಕ್ಟರ್ ಮುರುಗೇಶ್ ಚನ್ನಣ್ಣವರ್ ರಾಮ ಸೇತು ಸಮುದ್ರ ಮಾರ್ಗದಲ್ಲಿ 28 ಕಿ.ಮಿ.ಈಜುವ ಮೂಲಕ ಕರ್ನಾಟಕ ಪೊಲಿಸ್ ಇಲಾಖೆಗೆ ಕೀರ್ತಿ ತಂದಿದ್ದಾರೆ. ಇವರ ಜೊತೆಗೆ ಹುಬ್ಬಳ್ಳಿಯ ವೈದ್ಯಕೀಯ ವಿದ್ಯಾರ್ಥಿ ಅಮನ್ ಶಾನಭಾಗ, ಉತ್ತರ ಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು ಹಾಗೂ ಪಶ್ಚಿಮ ಬೆಂಗಾಳ ಮತ್ತು ಹರಿಯಾಣದ ಇಬ್ಬರು ಅಂಗವಿಕಲ ಕ್ರೀಡಾಪಟುಗಳನ್ನು ಒಳಗೊಂಡ ವಿಶೇಷ ಈಜು ತಂಡವು ಹಿಂದೂಮಹಾಸಾಗರ ಮತ್ತು ಬಂಗಾಲಕೊಲ್ಲಿಯ ಸಮುದ್ರದಲ್ಲಿ ಪ್ರತಿಕೂಲ ವಾತಾವರಣ ಅಲ್ಲದೆ ಆಕಾಶದೆತ್ತರಕ್ಕೆ ಚಿಮ್ಮುವ ಅಲೆಗಳ ನಡುವೆಯೇ ಈಜಿ ಕೇವಲ 8 ಗಂಟೆ 30 ನಿಮಿಷದಲ್ಲಿ ನಿಗದಿತ ಗುರಿ ಮುಟ್ಟಿ ಅದ್ಭುತ ಸಾಧನೆ ಮಾಡಿದೆ.
ಧರ್ಮಪತ್ನಿ ಶ್ವೇತಾ ಚನ್ನಣ್ಣವರ ಅವರ ಜೊತೆ ಬೋಟಿನಲ್ಲಿ ಶ್ರೀಲಂಕಾಗೆ ಹೋಗಿದ್ದ ಐರನ್ ಮ್ಯಾನ್, ಅಲ್ಲದೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಮುಂತಾದ ಸಾಧನೆ ಮಾಡಿರುವ ಚನ್ನಣ್ಣವರ್ ಈಗ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಲಂಕಾ ಕಡಲಿನ ಈಜಿನ ಯಶಸ್ಸಿನಿಂದ ಪ್ರೇರಿತರಾಗಿ ಮುಂಬರುವ ಜೂನ ತಿಂಗಳಲ್ಲಿ ವಿಶ್ವದ ಅತಿ ಕ್ಲಿಷ್ಟಕರವಾದ ಇಂಗ್ಲಿಷ್ ಕಾಲುವೆ (ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವಿನ 36 ಕಿಲೋಮೀಟರ ಕಾಲುವೆ) ಯನ್ನು ಈಜಲು ಅಮನ್ ಶಾನಭಾಗ ಜೊತೆ ಸಿದ್ಧತೆ ಆರಂಭಿಸಿದ್ದಾರೆ.
ಬೋಟ್ನಲ್ಲಿ ಶ್ರೀಲಂಕಾಗೆ ತೆರಳಿದ ತಂಡ
ಏ.17 ರಂದು ಬೋಟ್ ಮುಖಾಂತರ ಭಾರತದಿಂದ ಶ್ರೀಲಂಕಾಗೆ ತೆರಳಿಗೆ ಮುರುಗೇಶ ಚೆನ್ನಣ್ಣವರ ತಂಡದಲ್ಲಿ 8 ಜನರು ಇದ್ದರು. ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾದಿಂದ ಹಾಗೂ ಭಾರತ ಸರ್ಕಾರದಿಂದ ಅನುಮತಿ ಪಡೆದು, ಕಾನೂನು ಪ್ರಕ್ರಿಯೆ ಮುಗಿಸಿಕೊಂಡ ಬಳಿಕ, ಅಲ್ಲಿಂದ ಮರುದಿನ ಬೆಳಗ್ಗೆ 5.50 ರ ಸುಮಾರಿಗೆ ಸ್ವಿಮ್ಮಿಂಗ್ ಪ್ರಾರಂಭ ಮಾಡಿ, ಮಧ್ಯಾಹ್ನ 2.20 ಕ್ಕೆ ದಡ ತಲುಪಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮುರುಗೇಶ ಚೆನ್ನಣ್ಣವರ್, ನನಗೆ ಅತ್ಯಂತ ಸಂತೋಷ ವಿಷಯ. ನನ್ನ ಕುಟುಂಬ ಹಾಗೂ ನನ್ನ ಇಲಾಖೆ ಯಾವತ್ತಿಗೂ ಕ್ರೀಡಾ ಕ್ಷೇತ್ರದಲ್ಲಿ ನನಗೆ ಪ್ರೋತ್ಸಾಹ ಕೊಟ್ಟಿದೆ. ಮುಂಬರುವ ಜೂನ್ ತಿಂಗಳಲ್ಲಿ ಇಂಗ್ಲೆಂಡ್ ಮತ್ತು ಪ್ರಾನ್ಸ್ ನಡುವಿನ ಇಂಗ್ಲಿಷ್ ಕಾಲುವೆ 36 ಕಿ.ಮೀ ಉದ್ದ ಈಜುವ ಗುರಿ ಇದೆ ಎಂದರು.