ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ಇದೇ ರೀತಿ ನಮ್ಮ ವಿರುದ್ಧ ಇಲ್ಲಸಲ್ಲದ್ದನ್ನು ಮಾತನಾಡುವುದು ಮುಂದುವರೆಸಿದರೆ, ಆತನ ವಿರುದ್ಧ ಇರುವ ಪ್ರಕರಣದ ಮಾಹಿತಿಗಳನ್ನು ರಾಜರಾಜೇಶ್ವರಿ ನಗರ ಕ್ಷೇತ್ರದ ಪ್ರತಿ ಮನೆ ಮನೆಗೆ ಹಂಚಬೇಕಾಗುತ್ತದೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದರು.
ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಆತನ ಕರ್ಮಾಕಾಂಡಗಳನ್ನು ನಮ್ಮ ಕಾರ್ಯಕರ್ತರು ಕೇವಲ ಒಂದು ದಿನ ಹಂಚಿ ಸುಮ್ಮನಾಗುವುದಿಲ್ಲ, ನಿರಂತರವಾಗಿ ಹಂಚಲಿದ್ದಾರೆ. ಒಕ್ಕಲಿಗರ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯಲು ಆತನಿಗೆ ನಾಚಿಕೆಯಾಗುವುದಿಲ್ಲವೇ? ಮತಕ್ಕಾಗಿ ದಲಿತರನ್ನು ಬಳಸಿಕೊಂಡು ಅವರಿಗೆ ಅವಾಚ್ಯವಾಗಿ ನಿಂದಿಸುತ್ತಾನೆ. ಮಾಧ್ಯಮದವರ ಮುಂದೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ನಾನು ಮಾಧ್ಯಮ ನಡೆಸುತ್ತಿದ್ದೇನೆ, ನನ್ನ ಬಗ್ಗೆಯೇ ಮಾತನಾಡುತ್ತೀರಾ, ನನ್ನ ಮೇಲೆ ಕೇಸ್ ಹಾಕುತ್ತೀರಾ ಎಂದು ಬೆದರಿಕೆ ಹಾಕುತ್ತಾನೆ” ಎಂದು ಹರಿಹಾಯ್ದರು.
ಆಣೆ ಪ್ರಮಾಣದ ಸವಾಲಿನ ಬಗ್ಗೆ ಕೇಳಿದಾಗ, “ಆತ ಯಾರ ಮೇಲೆ ಆಣೆ ಪ್ರಮಾಣ ಮಾಡಿಲ್ಲ? ನೀವು ಹೋದರೆ ನಿಮ್ಮ ಮೇಲೂ ಆಣೆ ಪ್ರಮಾಣ ಮಾಡುತ್ತಾನೆ. ಆತ ಆಣೆ ಪ್ರಮಾಣ ಮಾಡುವುದರಲ್ಲಿ ನಿಪುಣ. ದೂರುದಾರರೇ ಆದಿ ಚುಂಚನಗಿರಿ ಮಠದಲ್ಲಿ ಆಣೆ ಪ್ರಮಾಣಕ್ಕೆ ಕರೆದಿದ್ದರಲ್ಲ. ಅಲ್ಲಿಗೆ ಹೋಗಿ ಆಣೆ ಪ್ರಮಾಣ ಮಾಡಬೇಕಿತ್ತು. ವಿಧಾನಸೌಧದ 344, 345ನೇ ಕೊಠಡಿಯಲ್ಲಿ ಅತ್ಯಾಚಾರ ಮಾಡಲಾಗಿದೆ ಎಂಬ ಹೇಳಿಕೆಯನ್ನು ಮಾಧ್ಯಮಗಳು ಮುಚ್ಚಿಟ್ಟುಕೊಂಡಿದ್ದೀರಲ್ಲಾ ಅದು ಸರಿಯೇ? ಈ ವಿಚಾರವನ್ನು ನೀವು ಸಾರ್ವಜನಿಕರಿಗೆ ತಿಳಿಸುತ್ತಿಲ್ಲವಲ್ಲ ಎಂಬ ವ್ಯಥೆಯಾಗುತ್ತಿದೆ. ವಿಧಾನಸೌಧ ಕಟ್ಟಿರುವುದು ಏಕೆ? ರಾಜ್ಯದ ಜನರ ಕಷ್ಟಸುಖ ನೋಡಲು, ರಾಜ್ಯದ ಹಿತ ಕಾಯಲು. ಹೀಗಾಗಿ ಅದು ರಾಜ್ಯದ ಹಿರಿಮೆಯ ಪ್ರತೀಕವಾಗಿದೆ. ಅಂತಹ ವಿಧಾನಸೌಧದಲ್ಲಿ ಈತ ಇಂತಹ ಹೀನ ಕೃತ್ಯ ಮಾಡಿದ್ದಾನೆ. ಈ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಅವರು ಆತನನ್ನು ಚಂಗ್ಲು ಎಂದು ಕರೆದಿದ್ದಾರೆ. ಆತನನ್ನು ಜತೆಯಲ್ಲಿ ಇಟ್ಟುಕೊಳ್ಳಲು ಬಿಜೆಪಿಯವರಿಗೆ ನಾಚಿಕೆ ಇಲ್ಲವೇ? ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲು ಗೊತ್ತಿಲ್ಲವೇ? ಹಾಗಿದ್ದರೆ ಇಂತಹ ಕೃತ್ಯಕ್ಕೆ ಅವರು ಬೆಂಬಲ ನೀಡುತ್ತಾರಾ?” ಎಂದು ವಾಗ್ದಾಳಿ ನಡೆಸಿದರು.