ಮಂಡ್ಯ :- ಜಮ್ಮುವಿನ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯನ್ನು ಖಂಡಿಸಿ ಬಜರಂಗ ದಳ, ಹಿಂದೂ ಪರ ಸಂಘಟನೆಗಳು ಮತ್ತು ಮದ್ದೂರು ತಾಲೂಕು ಭಾರತೀಯ ಜನತಾ ಮೋರ್ಚಾ ಬುಧವಾರ ಸಂಜೆ ನೂರಾರು ಕಾರ್ಯಕರ್ತರು ಮೇಣದ ಬತ್ತಿ ಹಿಡಿದು ಬೃಹತ್ ಪ್ರತಿಭಟನೆ ಮತ್ತು ಮಡಿದರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ದೇಶದ ಶೋಕಾಚರಣೆಯಲ್ಲಿ ಇನ್ಸ್ಪೆಕ್ಟರ್ ಸಂಭ್ರಮಾಚರಣೆ: ಗೃಹ ಸಚಿವರ ತವರಲ್ಲಿ ರೋಡ್ ಶೋ!?
ಮದ್ದೂರು ಪಟ್ಟಣದ ಹಳೇ ಬಸ್ ನಿಲ್ದಾಣ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದ ಆವರಣದಿಂದ ಪೇಟೆ ಬೀದಿ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ( ಟಿ.ಬಿ.ಸರ್ಕಲ್ ) ವೃತ್ತದವರೆಗೆ ಮೇಣದ ಬತ್ತಿ ಮೆರವಣಿಗೆ ನಡೆಸಿ ಕೆಲ ಕಾಲ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ
ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಯೋಧ ಸಿ.ಕೆ.ಸತೀಶ್ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಇನ್ನು ಕೆಲ ದಿನಗಳಲ್ಲೇ ಅಮರನಾಥ ಯಾತ್ರೆಯು ಆರಂಭಗೊಳ್ಳುವುದರಲ್ಲಿ ಇತ್ತು. ಯಾತ್ರೆಗಾಗಿ ನೋಂದಣಿ ಪ್ರಕ್ರಿಯೆಯು ಆರಂಭಗೊಂಡಿತ್ತು. ಇದೇ ವೇಳೆಯೇ ದಾಳಿ ನಡೆಸಲಾಗಿದೆ. ಇಂತಹ ವಿಕೃತಿ ಮನಸ್ಥಿತಿಯ ಉಗ್ರರಿಗೆ ತಕ್ಕ ಶಾಸ್ತಿಯಾಗಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.
ಜನರನ್ನು ಕೊಲ್ಲುವ ಮುನ್ನ ಅವರ ಗುರುತನ್ನು ಕೇಳಲಾಯಿತು ಎಂದು ದಾಳಿಯಲ್ಲಿ ಬದುಕುಳಿದವರು ಹೇಳುತ್ತಿದ್ದಾರೆ. ದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿರುವುದು ಇದೊಂದು ಉದ್ದೇಶಿತ ದಾಳಿ ಎಂದು ಹಿಂದೂ ಪರ ಸಂಘಟನೆಗಳ ಮುಖಂಡ ಗುರುಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಪುಲ್ವಾಮಾ ದಾಳಿಕೋರರ ಹೆಡೆಮುರಿ ಕಟ್ಟಿದ ರೀತಿಯಲ್ಲೆ ಈ ಉಗ್ರಗಾಮಿಗಳನ್ನು ಕೇಂದ್ರ ಸರ್ಕಾರ ಮುಲಾಜಿಲ್ಲದೆ ಸದೆಬಡಿಯಬೇಕು. ಗಡಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಬೇಕು ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು
ಕೇಂದ್ರಾಡಳಿತ ಪ್ರದೇಶವನ್ನಾಗಿ
ಕೇಂದ್ರ ಸರ್ಕಾರ ಈ ಕೂಡಲೇ ಜಾರಿಗೆ ತರಬೇಕೆಂದು ಪುರಸಭಾ ಸದಸ್ಯೆ ಪ್ರಿಯಾಂಕಾ ಅಪ್ಪುಗೌಡ ಒತ್ತಾಯಿಸಿದರು.
ಇದೇ ವೇಳೆ ಹಿಂದೂ ಮುಖಂಡರಾದ ಅಭಿಷೇಕ್, ನೈದಿಲೆಚಂದ್ರು, ಮ.ನ.ಪ್ರಸನ್ನಕುಮಾರ್, ರಾಘವೇಂದ್ರರಾವ್, ಕೆ.ಟಿ.ನವೀನ್, ಮನು, ಲೋಕೇಶ್, ನಿತ್ಯಾನಂದ, ಮಹೇಂದ್ರ, ಮಮತ, ಎಂ.ಸಿ.ಲಿಂಗರಾಜು, ತ್ರಿವೇಣಿ, ಮನ್ಮುಲ್ ಮಾಜಿ ನಿರ್ದೇಶಕಿ ರೂಪ, ಮುಖಂಡರಾದ ತ್ರಿವೇಣಿ, ಎಂ.ಸಿ.ಸಿದ್ದು, ಶ್ರೇಯಸ್, ಸುನಿಲ್, ಕೇಶವ, ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ