ಚಿಕ್ಕಬಳ್ಳಾಪುರ:- ಗ್ಯಾರಂಟಿಗಳಿಂದ ಖಜಾನೆ ಖಾಲಿ ಆಗಿಲ್ಲ. ಬಿಜೆಪಿಯವರ ಮಾತು ನಂಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಗ್ಯಾರಂಟಿಗಳಿಂದ ಖಜಾನೆ ಖಾಲಿ, ಪಾಪರ್ ಸರ್ಕಾರ ಎಂದು ಬಿಜೆಪಿಯವರು ಟೀಕೆ ಮಾಡುತ್ತಾರೆ. ಬಿಜೆಪಿಯವರ ಮಾತಲ್ಲಿ ಎಳ್ಳಷ್ಟು ಸತ್ಯ ಇಲ್ಲ ಎಂದರು.
ಚುನಾವಣಾ ಪೂರ್ವದಲ್ಲಿ ಜನರಿಗೆ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿದ್ದೆವು. ಅಧಿಕಾರಕ್ಕೆ ಬಂದ ಕೂಡಲೇ ನಾವು 5 ಗ್ಯಾರಂಟಿಗಳನ್ನ ಜನರಿಗೆ ಕೊಡುತ್ತಿದ್ದೇವೆ. 2 ವರ್ಷದಲ್ಲಿ 80 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಈ ವರ್ಷವೂ ಕೂಡ 50 ಸಾವಿರ ಕೋಟಿಗೂ ಹೆಚ್ಚು ಹಣ ಬಜೆಟ್ನಲ್ಲಿಟ್ಟಿದ್ದೇವೆ. ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಹಾಗಿದ್ರೆ ಇಂದು 1,000 ಕೋಟಿಗೂ ಅಧಿಕ ಕಾಮಗಾರಿಗಳಿಗೆ ಚಾಲನೆ ಕೊಡೋಕೆ ಆಗುತ್ತಿತ್ತಾ? ಪಾಪರ್ ಆಗಿರುವ ಸರ್ಕಾರ ಈ ಕೆಲಸ ಮಾಡಲು ಸಾಧ್ಯ ಇಲ್ಲ ಎಂದರು
ಬಿಜೆಪಿಯವರು ಜನಾಕ್ರೋಶ ಅಂತ ಹೋರಾಟ ಮಾಡುತ್ತಿದ್ದಾರೆ. ಸುರ್ಜೇವಾಲರು ಹೇಳಿರುವ ಹಾಗೆ ಗೋಡೆ ಮಂಕಾಗಿದೆ, ಕೊಳಕಾಗಿದೆ ಎಂದು ಹೆಣ್ಣುಮಗಳು ಹೇಳುತ್ತಾಳೆ. ಆದರೆ ಕೊಳಕು ಆಗಿರೋದು ಹೆಣ್ಣುಮಗಳ ಕಿಟಕಿಯ ಗಾಜು. ಕಿಟಕಿಯ ಗಾಜು ಶುದ್ಧ ಮಾಡದೇ ನೋಡಿ ಹಾಗೆ ಹೇಳುತ್ತಾಳೆ. ಅದೇ ರೀತಿ ಬಿಜೆಪಿಯವರು ಸಹ ನಮ್ಮ ಬಗ್ಗೆ ಟೀಕೆ ಮಾಡುತ್ತಾರೆ. ಕೇಂದ್ರ ಸರ್ಕಾರ ದಿನೇದಿನೇ ಬೆಲೆ ಏರಿಕೆ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಮೇಲೆ ಬೆಲೆ ಏರಿಕೆ ಮಾಡಿದ್ದರು. ಬಿಜೆಪಿ ಜನಾಕ್ರೋಶ ಆರಂಭ ಮಾಡಿದ ಮೇಲೆ ಬೆಲೆ ಏರಿಕೆ ಆಗಿದ್ದು, ಬೆಲೆ ಏರಿಕೆಗೆ ನೇರ ಕಾರಣ ಕೇಂದ್ರ ಸರ್ಕಾರ, ನರೇಂದ್ರ ಮೋದಿ ಕಾರಣ. ನಾವು ಅಭಿವೃದ್ಧಿ ಜೊತೆಗೆ ಗ್ಯಾರಂಟಿಗಳನ್ನು ಜನರಿಗೆ ಕೊಟ್ಟಿದ್ದೇವೆ. ಪಾಪರ್ ಸರ್ಕಾರದಲ್ಲಿ 38 ಸಾವಿರ ಕೋಟಿ ಹೆಚ್ಚು ಬಜೆಟ್ ಮಂಡಿಸಲು ಸಾಧ್ಯ ಇಲ್ಲ. ಬಿಜೆಪಿಯವರು ಸುಳ್ಳು ಅಪಾದನೆ ಆರೋಪ ಮಾಡೋದೆ ಅವರ ಕೆಲಸ ಎಂದರು.