ಪ್ರೇಮಕಾಶ್ಮೀರವಾಗಿದ್ದ ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಘೋರವಾಗಿ ಕೊಂದು ಹಾಕಿದ್ದರು. ಮಿನಿ ಸ್ವಿಜರ್ ಲ್ಯಾಂಡ್ ಎಂದೇ ಕರೆಸಿಕೊಳ್ಳುವ ಈ ಜಾಗ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳ..ಇಲ್ಲಿ ನೆತ್ತರು ಹರಿದ ಬಳಿಕ ಪ್ರವಾಸಿಗರು ಹೋಗುವ ಧೈರ್ಯ ಮಾಡ್ತಿಲ್ಲ. ಹೀಗಿರುವಾಗ ಖ್ಯಾತ ನಟರೊಬ್ಬರು ಪಹಲ್ಗಾಮ್ಗೆ ತೆರಳಿ ಪ್ರವಾಸಿಗರನ್ನು ಅಲ್ಲಿಗೆ ಬರುವಂತೆ ಕೋರಿದ್ದಾರೆ.
ಕನ್ನಡದಲ್ಲಿ ಎದೆಗಾರಿಕೆ, ಯಕ್ಷ, ಉಗ್ರಂ ಸೇರಿದಂತೆ ಸಾಕಷ್ಟು ಪರಭಾಷೆಯ ಚಿತ್ರಗಳಲ್ಲಿ ನಟಿಸಿರುವ ಅತುಲ್ ಕುಲಕರ್ಣಿ, ಮುಂಬೈನಿಂದ ಶ್ರೀನಗರಕ್ಕೆ ಪ್ರಯಾಣಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ʼಇದು ಹಿಂದೂಸ್ತಾನದ ಭೂಮಿ, ಇಲ್ಲಿ ಭಯಕ್ಕಿಂತ ಧೈರ್ಯವೇ ಹೆಚ್ಚು. ಬನ್ನಿ, ಕಾಶ್ಮೀರಕ್ಕೆ ಹೋಗೋಣ.. ನಾನು ಬಂದಿದ್ದೇನೆ, ನೀವೂ ಬನ್ನಿ..’ ಎಂದು ಅವರು ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.
ಏಪ್ರಿಲ್-ಮೇ ತಿಂಗಳುಗಳಲ್ಲಿ ಕಾಶ್ಮೀರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರ ಬರುತ್ತಾರೆ. ಆದರೆ ದಾಳಿಯ ನಂತರ, ವಿಮಾನವೂ ಖಾಲಿ ಇದೆ. ಈ ವಿಮಾನವು ಯಾವಾಗಲೂ ಪ್ರಯಾಣಿಕರಿಂದ ತುಂಬಿರುತ್ತದೆ ಎಂದು ಸಿಬ್ಬಂದಿ ಅತುಲ್ಗೆ ಮಾಹಿತಿ ನೀಡಿದರು. ‘ನಾವು ಈ ಜಾಗಗಳನ್ನು ಮತ್ತೆ ತುಂಬಬೇಕು’ ಎಂದು ಅತುಲ್ ಕುಲಕರ್ಣಿ ತಮ್ಮ ಫೋಟೋಗಳನ್ನು ಹಂಚಿಕೊಂಡು ಬರೆದ್ದಾರೆ.