ಚಾಮರಾಜನಗರ : 12 ವರ್ಷದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿರುವ ಶೀಲಾರವರ ಪುತ್ರ ಪ್ರಜ್ವಲ್ ಎಂಬುತಾನೆ ಮೃತಪಟ್ಟ ಬಾಲಕನಾಗಿದ್ದಾನೆ.
ಘಟನೆಯ ವಿವರ:
ಪ್ರಜ್ವಲ್ ತನ್ನ ಸಂಬಂಧಿಕರ ಮಗುವಾದ ಅಭಿಷೇಕ್ ಜೊತೆ ಆಟವಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಆ ಮಗುವಿನ ಕಾಲಿಗೆ ಪೆಟ್ಟಾಗಿತ್ತು. ಈ ವೇಳೆ ಮಗುವಿನ ಪೋಷಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇದರಿಂದ ಆತಂಕಗೊಂಡ ಪ್ರಜ್ವಲ್, ಮಗುವಿಗೆ ಏನಾದರೂ ಆಗುವುದೆಂಬ ಭೀತಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ವೇಲ್ ನಿಂದ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಅಕ್ಕಪಕ್ಕದವರು ತಕ್ಷಣವೇ ಪ್ರಜ್ವಲ್ನ್ನು ಲೊಕ್ಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು. ಬಳಿಕ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾಗ ತಪಾಸಣೆ ನಡೆಸಿದ ವೈದ್ಯರು ಪ್ರಜ್ವಲ್ ಮೃತಪಟ್ಟಿರುವುದಾಗಿ ಘೋಷಿಸಿದರು.
ಈ ಸಂಬಂಧ ಪ್ರಜ್ವಲ್ನ ಸೋದರ ಮಾವ ರಂಗಸ್ವಾಮಿ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.