ಬೆಂಗಳೂರು: ಡಿಜಿಟಲ್ ಮಾಧ್ಯಮಕ್ಕೆ ಜಾಹಿರಾತು ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಟಲ್ ಜಾಹೀರಾತು ನೀತಿ-2024 ಜಾರಿಗೊಳಿಸಾಗಿದೆ. ಡಿಜಿಟಲ್ ಜಾಹೀರಾತು ನೀತಿಯನ್ನ ಜಾರಿಗೊಳಿಸಲು ಪ್ರಮುಖ ಕಾರಣಿಕರ್ತರಾದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅವರನ್ನ ಕೆಎಸ್ ಡಿಎಂಎಫ್ ವತಿಯಿಂದ ನಗರದ ಪ್ರೆಸ್ ಕ್ಲಬ್ ನಲ್ಲಿ ಅಭಿನಂದಿಸಲಾಯಿತು.
ಇದೆ ಸಂದರ್ಭದಲ್ಲಿ ಮಾತನಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ರಾಜ್ಯದಲ್ಲಿ ಡಿಜಿಟಲ್ ನೀತಿ ತರುವ ಬಗ್ಗೆ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಡಿಜಿಟಲ್ ಮಾಧ್ಯಮದ ಅಗತ್ಯತೆ ಬಗ್ಗೆ ತಿಳಿ ಹೇಳಿ ಆ ಬಗ್ಗೆ ಚರ್ಚೆ ನಡೆಸಿದ್ದೆ. ಸಣ್ಣ ಪತ್ರಿಕೆಯಂತೆ ಡಿಜಿಟಲ್ ಮಾಧ್ಯಮವನ್ನು ಕೈಹಿಡಿಯುವ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಮಾತನಾಡಿ ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೂ ಜಾಹೀರಾತು ನೀಡಲು ಹಣಕಾಸು ವೆಚ್ಚ, ಡಿಜಿಟಲ್ ಮೀಡಿಯಾ ನೀತಿಯ ನೀಲನಕ್ಷೆ ಬಗ್ಗೆಯೂ ತಿಳಿಸಿದೆ.
ಇದಕ್ಕೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದರು. ಹೀಗಾಗಿ ಡಿಜಿಟಲ್ ಜಾಹೀರಾತು ನೀತಿ ತರಲು ಸಾಧ್ಯವಾಯಿತು. ಈ ನಿಟ್ಟಿನಲ್ಲಿ ಡಿಜಿಟಲ್ ನೀತಿಯನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಪತ್ರಕರ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದೆ ಬದಲಾವಣೆ ಮಾಡಲಾಗುವುದು ಎಂದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪತ್ರಕರ್ತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಾಧ್ಯಮ ಮಾನ್ಯತೆಯಿರುವವರಿಗೆ ಆರೋಗ್ಯ ಸಂಜೀವಿನಿಯಡಿ ಕಾರ್ಡ್ ನೀಡಲು ಕ್ರಮ ಕೈಗೊಳ್ಳುತ್ತೇವೆ. ಡಿಜಿಟಲ್ ಮಾಧ್ಯಮದವರಿಗೂ ವಾರ್ತಾ ಇಲಾಖೆಯಿಂದ ಐಡಿ ಕಾರ್ಡ್ ಅಥವಾ ಮಾನ್ಯತಾ ಕಾರ್ಡ್ ನೀಡಲು ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರ ಜೊತೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಡಿಜಿಟಲ್ ಮಾಧ್ಯಮಕ್ಕೆ ಜಾಹಿರಾತು ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಟಲ್ ಜಾಹೀರಾತು ನೀತಿ-2024 ಜಾರಿಗೊಳಿಸಿರುವುದು ನಮಗೆ ಶಕ್ತಿತುಂಬಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ಬೆಂಗಳೂರಿನಲ್ಲಿ ವಿಶೇಷವಾದ ಡಿಜಿಟಲ್ ಮಾಧ್ಯಮ ಸಮೇಳನವನ್ನು ಹಮ್ಮಿಕೊಂಡು ರಾಷ್ಟ್ರಮಟ್ಟದ ಡಿಜಿಟಲ್ ಮಾಧ್ಯಮದ ಪತ್ರಕರ್ತರನ್ನು ಆಹ್ವಾನಿಸುವ ಚಿಂತನೆಯಿದೆ ಎಂದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ (KSDMF)ರಾಜ್ಯಾಧ್ಯಕ್ಷರಾದ ಬಿ. ಸಮೀವುಲ್ಲಾ ಬಿ ಬೆಲಗೂರು ಈ ಕಾರ್ಯಕ್ರಮದಲ್ಲಿ ತಿಳಿಸಿದರು.
ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್ ಮಾತನಾಡಿ, ಡಿಜಿಟಲ್ ಮೀಡಿಯಾ ಫೋರಂ ಈಗಿನ ಡಿಜಿಟಲ್ ಮಾಧ್ಯಮಕ್ಕೆ ಅತ್ಯಗತ್ಯವಾಗಿತ್ತು. ವೃತ್ತಿಪರ ಡಿಜಿಟಲ್ ಪತ್ರಕರ್ತರಿಗೆ ಈ ಕೆಎಸ್ ಡಿಎಂಎಫ್ ಫೋರಂ ಹೆಚ್ಚಿನ ಅನುಕೂಲವಾಗಿದೆ ಎಂದರು.
ಸಮಾರಂಭದಲ್ಲಿ KSDMF ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಜಂಟಿ ಕಾರ್ಯದರ್ಶಿ ಮಾಲತೇಶ್ ಅರಸ್ ಹರ್ತಿಕೋಟೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕೆಎಸ್ ಡಿಎಂಎಫ್ ಉಪಾಧ್ಯಕ್ಷರಾದ ಸುನಿಲ್ ಶಿರಸಿಂಗಿ, ಪ್ರಧಾನ ಕಾರ್ಯದರ್ಶಿ ಕೆ.ಎಂ ಶಿವಕುಮಾರ್, ಖಜಾಂಚಿ ಸನತ್ ಕುಮಾರ್ ರೈ, ಜಂಟಿ ಕಾರ್ಯದರ್ಶಿಗಳಾದ ಮಾಲತೇಶ್ ಅರಸ್ ಹರ್ತಿಕೋಟೆ, ರಜನಿ ಹಾಗೂ ಕೆಎಸ್ ಡಿಎಂಎಫ್ ಸದಸ್ಯರು, ಹಿರಿಯ ಪತ್ರಕರ್ತರಾದ ಹಮೀದ್ ಪಾಳ್ಯ, ಪ್ರತಿಧ್ವನಿ ಶಿವಕುಮಾರ್, ವಿಜಯ್ ಭರಮಸಾಗರ, ಮಂಜು ಬಾಣಗೆರೆ, ರವೀಂದ್ರ ಜೋಶಿ, ಮುತ್ತುರಾಜ್, ಶ್ಯಾಮ್ , ರಮೇಶ್ , ದರ್ಶನ್ ಮತ್ತು ಅನೇಕರು ಭಾಗವಹಿಸಿದ್ದರು.