ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಹೊಸದೊಂದು ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಅದಕ್ಕೆ PA Productions ಎಂದು ಹೆಸರಿಟ್ಟಿದ್ದಾರೆ. P ಅಂದ್ರೆ ಪುಷ್ಪ A ಅಂದ್ರೆ ಅರುಣ್ ಕುಮಾರ್ ಎಂದರ್ಥ. ಯಶ್ ಅಪ್ಪ ಮತ್ತು ಅಮ್ಮನ ಹೆಸರು ಇರೋ ಈ ಪ್ರೊಡಕ್ಷನ್ ಹೌಸ್ ಮೂಲಕ ಚೊಚ್ಚಲ ಚಿತ್ರ ನಿರ್ಮಾಣವಾಗುತ್ತಿದೆ. ಅಕ್ಷಯ ತೃತೀಯ ದಿನವಾದ ಇಂದು ಚಿತ್ರತಂಡ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಿದೆ.
PA Productions ಮೊದಲ ಪ್ರಯತ್ನಕ್ಕೆ ಕೊತ್ತಲವಾಡಿ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ಶ್ರೀರಾಜ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಿರಿಯ ನಿರ್ದೇಶಕರಾದ ಕೆವಿ ರಾಜು, ರವಿಶ್ರೀವತ್ಸ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.
ಕನ್ನಡದ ಪ್ರತಿಭಾನ್ವಿತ ನಾಯಕ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದು, ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿ ನಟಿಸುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗರಂತಹ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ಇಲ್ಲಿಯವರೆಗೂ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ಕೊತ್ತಲವಾಡಿಯಲ್ಲಿ ಕಂಪ್ಲೀಟ್ ಮಾಸ್ ಗೆಟಪ್ ತೊಟ್ಟಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ನಲ್ಲಿಯೂ ಪೃಥ್ವಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.
https://x.com/paproductionsin/status/1917453072412074382
PA ಪ್ರೊಡಕ್ಷನ್ಸ್ ಪ್ರಮುಖ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ನಿಟ್ಟಿನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣ ಸಂಸ್ಥೆಯನ್ನು ಹುಟ್ಟಾಕಿದ್ದಾರೆ. ಅದರಂತೆ ಕೊತ್ತಲವಾಡಿ ಚಿತ್ರದಲ್ಲಿಯೂ ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಿದೆ. ಯುವ ನಿರ್ದೇಶಕರ ಜೊತೆಗೆ ಹಿನ್ನೆಲೆ ಸಂಗೀತ ಕೊಟ್ಟಿರುವ ಅಭಿನಂದನ್ ಕಶ್ಯಪ್, ಸಾಹಸ ನಿರ್ದೇಶಕ ಸಾಗರ್ ಕೂಡ ಹೊಸಬರೇ.
ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಕಥೆಯಲ್ಲಿ ಪೃಥ್ವಿ ಅಂಬರ್ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ. ಕಾರ್ತಿಕ್ ಎಸ್ ಕ್ಯಾಮೆರಾ ಕೈಚಳಕ, ರಾಮಿಸೆಟ್ಟಿ ಪವನ್ ಸಂಕಲನ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ, ಡಾ.ವಿ.ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್ ಹಾಗೂ ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಕೊತ್ತಲವಾಡಿ ಸಿನಿಮಾಗೆ ಇದೆ.