ದಾವಣಗೆರೆ: ಇತ್ತೀಚಿಗಂತೂ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರರವರೆಗೂ ಪ್ರತಿಯೊಬ್ಬರೂ ಕೂಡಾ ಮೊಬೈಲ್ ಎನ್ನುವ ಮಾಯಾಜಾಲದಲ್ಲಿ ಸಿಲುಕಿಕೊಂಡಿದ್ದಾರೆ. ಹೌದು ಮೊಬೈಲ್ ಇಲ್ಲದೆ ಇಂದಿನ ಕಾಲದಲ್ಲಿ ಬದುಕುವುದು ಕಷ್ಟ ಎನ್ನುವಂತಾಗಿದೆ. ಇದೀಗ ಮೊಬೈಲ್ನಲ್ಲಿ ಮಾತನಾಡುತ್ತಾ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹರಿಹರ ರೈಲು ನಿಲ್ದಾಣದಲ್ಲಿ ನಡೆದಿದೆ.
ವಿದ್ಯಾರ್ಥಿನಿ ಶ್ರಾವಣಿ (23) ಮೃತ ದುರ್ದೈವಿ. ಬಳ್ಳಾರಿ ಮೂಲದ ಶ್ರಾವಣಿ ಮೈಸೂರಿನಲ್ಲಿ ಎಂಬಿಎ ಓದುತ್ತಿದ್ದರು. ಶುಭ ಕಾರ್ಯಕ್ಕೆಂದು ಶ್ರಾವಣಿ ಹರಿಹರದಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದಿದ್ದರು.
ಮಂಗಳವಾರ ರಾತ್ರಿ ಮೊಬೈಲ್ನಲ್ಲಿ ಮಾತನಾಡುತ್ತ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿದೆ. ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ವಿಭಾಗದ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.