ಹುಬ್ಬಳ್ಳಿ: ನಗರದ ಹೊಸ ಕೋರ್ಟ್ ಹಿಂಭಾಗದಲ್ಲಿನ ಕಲ್ಲೂರ ಲೇಔಟ್ ಮೈದಾನದಲ್ಲಿ ಮೇ 1ರಿಂದ ಮೇ 3ರವರೆಗೆ ಕರಾವಳಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನರ್‌ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮೇ 1ರಂದು ಸಂಜೆ 5 ಗಂಟೆಗೆ ಕೆ.ಶಂಕರ ಶೆಟ್ಟಿ ವೇದಿಕೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮೇಯರ್ ರಾಮಪ್ಪ ಬಡಿಗೇರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದರು.
ಮೇ 2 ರಂದು ಸಂಜೆ 6 ಗಂಟೆಗೆ ಮೂಡುಬಿದಿರೆಯ ಅಳ್ವಾಸ್ ವಿದ್ಯಾರ್ಥಿಗಳಿಂದ ‘ನರ ಶಾರ್ದೂಲ’ ಯಕ್ಷಗಾನ ಪ್ರಸಂಗ, ಮೇ 3 ರಂದು ಸಂಜೆ 6.30ಕ್ಕೆ ಕುದ್ರೋಳಿ ಗಣೇಶ ಮತ್ತು ತಂಡದವರಿಂದ ಜಾದೂ ಹಾಗೂ ಸಂಜೆ 4 ಗಂಟೆಗೆ ಪಿಲಿ (ಹುಲಿ) ಡಾನ್ಸ್ ಪ್ರದರ್ಶನ ಜರುಗಲಿದೆ . ಪ್ರತಿ ದಿನ ಸಂಜೆ ಚಂಡೆ ಮೇಳ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಕರಾವಳಿ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಅಲ್ಲಿನ ತಿಂಡಿ, ವಸ್ತ್ರ ವೈಭವ ತಿಳಿಸುವ ಉದ್ದೇಶದಿಂದ ಈ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರಲಿದೆ.
ಮೇಳದಲ್ಲಿ ಆಹಾರ ವೈವಿಧ್ಯ ಉತ್ಸವದಲ್ಲಿ ಮಾಂಸಾಹಾರ ಮತ್ತು ಸಸ್ಯಾಹಾರ ವಿಭಾಗದಲ್ಲಿ ಹಲಸಿನಕಾಯಿ ಮತ್ತು ಮಾವಿನ ಹಣ್ಣು-ಕಾಯಿಯಿಂದ ಮಾಡಿದ ಗುಜ್ಜೆ ಹಲ್ವಾ ಹಪ್ಪಳ ಚಿಪ್ಸ್ ಹಾಗೂ ಕರಾವಳಿಯ ಸಾಂಬಾರು ಪುಡಿ ತಂಬುಳಿ ಕಾಯಿ ಚಟ್ಟಿ ಸೇರಿ ವಿವಿಧ ಪದಾರ್ಥಗಳು ಆಹಾರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ 15 ಬಗೆಯ ಗೋಲಿ ಸೋಡಾ ಸಹ ಉತ್ಸವದಲ್ಲಿ ಇರಲಿದೆ.