ZEE ಕನ್ನಡ ಹೊಸ ಬಗೆಯ ಕಾರ್ಯಕ್ರಮಗಳ ಮೂಲಕ ಕಿರುತೆರೆ ಲೋಕದಲ್ಲಿ ಹೆಸರು ಮಾಡಿದೆ. ಅದರ ಜೊತೆಗೆ ZEE5 ಒಟಿಟಿಯಲ್ಲಿ ಸದಾಭಿರುಚಿ ಸಿನಿಮಾಗಳನ್ನು ನೀಡುತ್ತಿದೆ. ಇದೇ ಮೊದಲ ಬಾರಿಗೆ ZEE ಕನ್ನಡದಲ್ಲೊಂದು ಹೊಸ ಪ್ರಯೋಗ ಮಾಡಿದ್ದು, ಅದಕ್ಕೆ ಭರಪೂರ ರೆಸ್ಪಾನ್ಸ್ ಸಿಗುತ್ತಿದೆ. ಕನ್ನಡದಲ್ಲಿ ಮೊದಲ ಬಾರಿಗೆ ಮಿನಿ ವೆಬ್ ಸರಣಿ ZEE5 ಪರಿಚಯಿಸಿದೆ. ಕನ್ನಡದ ಮೊದಲ ಮಿನಿ ವೆಬ್ ಸರಣಿ ಅಯ್ಯನ ಮನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಈ ಸರಣಿ ಭಾಷೆ ಅಡೆತಡೆಗಳನ್ನು ಮೀರಿ ದಾಖಲೆಯ ವೀಕ್ಷಣೆಯನ್ನು ಕಂಡಿದೆ. ಏಪ್ರಿಲ್ 25ರಂದು ಅಯ್ಯನ ಮನೆ ವೆಬ್ ಸರಣಿ ZEE5ನಲ್ಲಿ ಸ್ಟ್ರೀಮಿಂಗ್ ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೆ 50 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ ಕಾಣುವ ಮೂಲಕ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಪ್ರಾದೇಶಿಕ ಭಾಷೆಯ ವೆಬ್ ಸರಣಿ ಈ ಮಟ್ಟದ ವೀಕ್ಷಣೆ ಕಂಡಿರುವುದು ಇಡೀ ತಂಡಕ್ಕೂ ಖುಷಿ ಕೊಟ್ಟಿದೆ.
ಜಾಜಿ ಪಾತ್ರದಲ್ಲಿ ಅಮೋಘವಾಗಿ ನಟಿಸಿರುವ ನಟಿ ಖುಷಿ ರವಿ, “ಅಯ್ಯನ ಮನೆ ಭಾಗವಾಗಿರುವುದು ನಿಜಕ್ಕೂ ಅವಿಸ್ಮರಣೀಯ ಅನುಭವ. ನನ್ನ ಪಾತ್ರವನ್ನು ಚಿತ್ರಿಸುವುದು ಸವಾಲಿನದ್ದಾಗಿದ್ದರೂ ಅದು ಈಗ ಪ್ರತಿಫಲದಾಯಕವಾಗಿ ಕಾಣುತ್ತಿದೆ. ಇಷ್ಟು ಕಡಿಮೆ ಅವಧಿಯಲ್ಲಿ ವೆಬ್ ಸರಣಿ ಮೈಲಿಗಲ್ಲು ದಾಟಿದೆ. ನನ್ನ ಪಾತ್ರವೂ ನೋಡುಗರಿಗೆ ಇಷ್ಟವಾಗಿದೆ. ಈ ರೀತಿಯ ಕನ್ನಡ ಕಥೆಗಳಿಗೆ ಸ್ಥಳಾವಕಾಶ ಕಲ್ಪಿಸಿದ್ದಕ್ಕಾಗಿ ನಾನು ZEE5 ಮತ್ತು ಶ್ರುತಿ ನಾಯ್ಡು ಪ್ರೊಡಕ್ಷನ್ಸ್ಗೆ ತುಂಬಾ ಕೃತಜ್ಞನಾಗಿದ್ದೇನೆ” ಎಂದು ಹೇಳಿದ್ದಾರೆ.
ನಿರ್ದೇಶಕ ರಮೇಶ್ ಇಂದಿರಾ ಮಾತನಾಡಿ, “ಅಯ್ಯನ ಮನೆ ಭಯ, ನಂಬಿಕೆ ಮತ್ತು ಕುಟುಂಬವನ್ನು ಪ್ರತಿಬಿಂಬಿಸುವ ಕಥೆ. ಇದು ಈ ರೀತಿಯ ಮೈಲಿಗಲ್ಲು ಸೃಷ್ಟಿಸಿರುವುದು ಖುಷಿಯ ವಿಷಯ. ನಾನು ಪ್ರತಿ ಫ್ರೇಮ್ನಲ್ಲೂ ಇಷ್ಟಪಟ್ಟು ಕೆಲಸ ಮಾಡಿದ್ದೇನೆ. ನನ್ನ ಅದ್ಭುತ ಪಾತ್ರವರ್ಗಕ್ಕೆ ನಾನು ಕೃತಜ್ಞನಾಗಿದ್ದೇನೆ: ಖುಷಿ, ಅಕ್ಷಯ, ಮಾನಸಿ ಮತ್ತು ಅದ್ಭುತ ತಂಡ. ZEE5 ಈ ರೀತಿಯ ಕಥೆಗಳಿಗೆ ಜೀವ ತುಂಬಲು ಸಹಾಯ ಮಾಡಿದೆ. ಅಯ್ಯನ ಮನೆ ಕೇವಲ ಆರಂಭ ಎಂದು ಹೇಳಿದ್ದಾರೆ.
ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ನಡೆಯುವ ಕಥೆಯೇ ಅಯ್ಯನ ಮನೆ. ಜಾಜಿ ಮದುವೆಯಾಗಿ ತನ್ನ ಗಂಡನ ಮನೆಗೆ ಬರುತ್ತಾಳೆ. ಸೊಸೆ ಕಾಲಿಟ್ಟ ಕ್ಷಣವೇ ಮಾವ ಕೊನೆಯುಸಿರೆಳೆಯುತ್ತಾರೆ. ಅದು ಜಾಜಿಯ ಕಾಲ್ಗುಣದಿಂದ ನಡೆದಿದ್ದಾ ಅಥವಾ ಕಾಕತಾಳಿಯನಾ ? ಎನ್ನುವ ಪ್ರಶ್ನೆಯ ನಡುವೆ ಸರಣಿ ಸಾವುಗಳ ನಿಗೂಢತೆ ಜಾಜಿಯ ಆತಂಕವನ್ನು ಹೆಚ್ಚಿಸುತ್ತೆ. ಪೂಜಾರಿ ಹೇಳಿದ ಮಾತು ಜಾಜಿಯ ನೆಮ್ಮದಿಯನ್ನೇ ಕಿತ್ತುಕೊಳ್ಳುತ್ತೆ. ಪೂಜಾರಿ ಹೇಳಿದ ಆ ಮಾತೇನು..? ಮನೆಯಲ್ಲಿ ನಡೆಯುವ ಸರಣಿ ಸಾವುಗಳಿಗೆ ಕಾರಣವೇನು ? ಜಾಜಿಯ ಅತ್ತೆ ಜಾಜಿಯ ಅತ್ತೆ ನಾಗಲಂಬಿಕೆ ಯಾವುದಾದರೂ ರಹಸ್ಯವನ್ನು ಮುಚ್ಚಿಡುತ್ತಿದ್ದಾರಾ ? ದುಷ್ಯಂತನ ಸಹೋದರರ ಉದ್ದೇಶವೇನು ? ಈ ಪ್ರಶ್ನೆಗಳಿಗೆ ಉತ್ತರವನ್ನು ಈ ಸರಣಿಯನ್ನು ನೋಡಿಯೇ ನೀವು ಪಡೆಯಬೇಕು.
ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ʼಅಯ್ಯನ ಮನೆʼ ವೆಬ್ ಸೀರೀಸ್ ಗೆ ಶೃತಿ ನಾಯ್ಡು ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಏಳು ಎಪಿಸೋಡ್ ಹೊಂದಿರುವ ವೆಬ್ ಸೀರೀಸ್ ನಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಅಭಿನಯಿಸಿದ್ದಾರೆ. ಹಲವರು ಅಮೋಘವಾಗಿ ನಟಿಸಿದ್ದಾರೆ. ನಿಗೂಢತೆ, ಸಸ್ಪೆನ್ಸ್, ಥ್ರಿಲ್ಲರ್ ಹಾದಿಯಲ್ಲಿ ಸಾಗುವ ಅಯ್ಯನ ಮನೆ ಮನೆಮಂದಿ ಕುಳಿತು ನೋಡುವ ಅದ್ಭುತ ವೆಬ್ ಸರಣಿಯಾಗಿದೆ.